ಕಸಾಪ ಭವನದ ಮೇಲೆ ಕಿಡಿಗೇಡಿಗಳ ದಾಳಿ: ಕವಿಗೋಷ್ಠಿಯ ತಂಡ ಖಂಡನೆ
ಹಾಸನ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಪುಡಿ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ಈ ಘಟನೆಯನ್ನು ಮನೆ ಮನೆ ಕವಿಗೋಷ್ಠಿಯ ತಂಡ ಖಂಡಿಸಿದೆ.
ಸಾಹಿತ್ಯ ಪರಿಷತ್ತು ನಾಡು ನುಡಿ ಉಳಿವು, ಹಾಗೂ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿತವಾದ ಸಂಸ್ಥೆ. ಶತಮಾನದಿಂದ ಕನ್ನಡದ ಪರ ಹಾಗೂ ಅದರ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯಮೂಲ್ಯ ಸೇವೆಗೈಯುತ್ತಾ ಬರುತ್ತಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಆಸ್ತಿ. ಇಂತಹ ಸಂಸ್ಥೆಯ ಮೇಲೆ ದಾಳಿ ಮಾಡಿ ಕನ್ನಡ ಮನಸ್ಸುಗಳನ್ನು ಕೆರಳಿಸುವ ಕೆಲಸ ಮಾಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆಹಚ್ಚಿ ಕಾರಣ ತಿಳಿದು ತಕ್ಕ ಶಿಕ್ಷೆ ನೀಡಬೇಕೆಂದು ಮನೆಮನೆ ಕವಿಗೋಷ್ಠಿ ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್, ಹಿರಿಯ ಸದಸ್ಯರಾದ ಎನ್.ಎಲ್.ಚನ್ನೇಗೌಡ, ಚಂದ್ರಕಾಂತ ಪಡೆಸೂರು, ಡಾ.ಕೆ.ಕೆ.ಜಯಚಂದ್ರಗುಪ್ತ ಒತ್ತಾಯಿಸಿದ್ದಾರೆ.
ಈಗಾಗಲೇ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಅವರು ದೂರು ದಾಖಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಪರಿಷತ್ನ ಮೇಲೆ ದಾಳಿ ಮರುಕಳಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.