ಜಿಲ್ಲಾ ಕ್ರೀಡಾಂಗಣಕ್ಕೆ ಸಿಬ್ಬಂದಿ ಕೊರತೆ
ಹಾಸನ: ಒಂದೇ ಕಡೆ 32 ಎಕರೆ ಪ್ರದೇಶದಲ್ಲಿ ಎಲ್ಲಾ ರೀತಿಯ ಆಟೋಟಗಳಿಗೆ ಪ್ರತ್ಯೇಕ ಅಂಗಣ ಹೊಂದಿರುವ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಕೇವಲ ಮೂರು ಮಂದಿ ಖಾಯಂ ಸಿಬ್ಬಂದಿಗಳಿರುವುದು ವಿಪರ್ಯಾಸವೇ ಸರಿ.
ಎಲ್ಲಾ ಆಟೋಟಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಖಾಯಂ ಸಿಬ್ಬಂದಿಗಳನ್ನು ನೇಮಿಸುವಲ್ಲಿ ಹಿಂದುಳಿದಿದೆ. ಇದರಿಂದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್, ಹಾಕಿ, ಫುಟ್‌ಬಾಲ್, ವಾಲಿಬಾಲ್ ಜೊತೆ ಸುಸಜ್ಜಿತ ಈಜುಕೊಳವಿರುವ ಒಳಾಂಗಣ ಹೊಂದಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ಆರಂಭಗೊಂಡಿದೆ. 48 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಬಲ್ ಟೆನ್ನಿಸ್ ಕೋರ್ಟ್ ಶೀಘ್ರವೇ ಉದ್ಘಾಟನೆಗೆ ಸಿದ್ಧವಾಗಲಿದೆ. ಸುತ್ತಲೂ 15 ಅಡಿ ಎತ್ತರದ ಹಸಿರು ಕಾಂಪೌಂಡ್‌ನಿಂದ ರಕ್ಷಣೆ ಪಡೆದಿರುವ ಕ್ರೀಡಾಂಗಣದಲ್ಲಿ 2 ಅತ್ಯಾಧುನಿಕ ಮಾದರಿಯ ಸಿಂಥೆಟಿಕ್ ಕೋರ್ಟ್ ನಿರ್ಮಿಸಲಾಗಿದೆ.
ನೌಕರರ ಕೊರತೆ: ಪ್ರಸ್ತುತ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಶಿವಾನಂದ ಸೇರಿದಂತೆ ವ್ಯವಸ್ಥಾಪಕರು ಹಾಗೂ ಗುಮಾಸ್ತರನ್ನು ಬಿಟ್ಟರೆ ಈ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ. ಇದರಿಂದ ಕಚೇರಿಯ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಇನ್ನು ಈ ಇಲಾಖೆಗೆ ಒಬ್ಬ ಡಿ ಗ್ರೂಪ್ ನೌಕರ, ಡ್ರೈವರ್, ಇಬ್ಬರು ಮಾರ್ಕರ್‌ಗಳ ಖಾಯಂ ನೇಮಕಾತಿಯ ಅವಶ್ಯಕತೆ ಇದೆ.
ಇನ್ನು ಕೋಚ್ ವಿಷಯಕ್ಕೆ ಬಂದರೆ ನಾಲ್ಕು ಮಂದಿ ಕೋಚ್‌ಗಳಿದ್ದು, ಪ್ರಸ್ತುತ ಇನ್ನು ನಾಲ್ಕು ಮಂದಿ ಕೋಚ್‌ಗಳ ಅವಶ್ಯಕತೆ ಇದೆ. ಇದರ ಜೊತೆಗೆ ಜಿಲ್ಲಾ ಕ್ರೀಡಾಂಗಣ ನಿರ್ವಹಣೆ ಮಾಡುವವರು, ಕಾವಲುಗಾರರ ಸೇರಿದಂತೆ ಸುಮಾರು 15 ಮಂದಿ ಕೆಲಸಗಾರರ ಅವಶ್ಯಕತೆ ಜಿಲ್ಲಾ ಕ್ರೀಡಾಂಗಣಕ್ಕೆ ಇದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣವನ್ನು ಹೊಂದಿದ್ದು, ಅಲ್ಲಿಯೂ ಸಹ ಸಿಬ್ಬಂದಿಗಳಿಲ್ಲದೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ.
ಇದ್ದೂ ಇಲ್ಲದ ಸ್ಥಿತಿ: ಎಲ್ಲಾ ಆಟಗಳಿಗೆ ಅವಕಾಶ ಇಲ್ಲಿದ್ದರೂ, ಸೂಕ್ತ ರೀತಿಯ ಸೌಲಭ್ಯ ಇಲ್ಲದೇ ಇರುವುದು ಮತ್ತು ಹೇಳೋರಿಲ್ಲ, ಕೇಳೋರಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲವೂ ಇದ್ದು ಇಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ತಾಲೂಕುಗಳಲ್ಲಿ ಇರುವ ಕ್ರೀಡಾಂಗಣಗಳಿಗೂ ಸಿಬ್ಬಂದಿಗಳ ಅವಶ್ಯಕತೆ ಇದ್ದು, ಅಲ್ಲಿಗೂ ಸಿಬ್ಬಂದಿಗಳನ್ನು ನೇಮಕ ಮಾಡಿದರೆ ಕ್ರೀಡಾಂಗಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸರ್ಕಾರದ ಆಸ್ತಿ ಹಾಳಾಗುವುದು ತಪ್ಪಿದಂತಾಗುತ್ತದೆ.
ಸೌಲಭ್ಯ, ಸಿಬ್ಬಂದಿ ಕೊರತೆ
ಜಿಲ್ಲಾ ಕ್ರೀಡಾಂಗಣದಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಕ್ರೀಡಾಂಗಣದ ನಿರ್ವಹಣೆಗೆ ತೊಡಕುಂಟಾಗುತ್ತಿದೆ. ಒಂದೇ ಸ್ಥಳದಲ್ಲಿ ಎಲ್ಲಾ ಕ್ರೀಡೆಗಳನ್ನು ಆಟವಾಡುವತಂಹ ಅವಕಾಶ ಇಲ್ಲಿ ಲಭ್ಯವಿದೆ. ಆದರೆ ಆದಕ್ಕೆ ಸಂಬಂಧಿಸಿದ ಸೌಲಭ್ಯಗಳಿಲ್ಲ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆ ಉಂಟಾಗುತ್ತಿದೆ.
ಪ್ರವೀಣಿ ಕುಮಾರ್, ಕ್ರೀಡಾಪಟು
ಪಿ. ರವಿಕುಮಾರ್