ನೀರಾವರಿ ಸಲಹಾ ಸಮಿತಿ ರಚನೆ ಖಚಿತ
ಚನ್ನರಾಯಪಟ್ಟಣ: ಕಾವೇರಿ ನೀರು ಹಂಚಿಕೆ ಕುರಿತು ನೀರಾವರಿ ಸಲಹಾ ಸಮಿತಿ ರಚನೆ ಮಾಡಬಾರದೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದರು.
ತಾಲೂಕಿನ ಆನೆಕೆರೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶಂಬುಲಿಂಗೇಶ್ವರ ದೇವಾಲಯ ಉಧ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾವೇರಿ ನೀರು ಹಂಚಿಕೆ ಕುರಿತು ಏನೆಲ್ಲಾ ಮನವಿ ಮಾಡಿದರೂ ನೀರಾವರಿ ಸಲಹಾ ಸಮಿತಿ ರಚನೆ ಖಚಿತವಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಈ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುವುದು ಖಚಿತ ಎಂದರು.
ತಮಿಳರ ನೋಡಿ ಕಲಿಯಿರಿ: ರಾಜ್ಯದಲ್ಲಿ ಬೆಜೆಪಿ ಪಕ್ಷದ ಸಂಸತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರುಗಳು ಹಾಗೂ ಕಾಂಗ್ರೆಸ್ ಸದಸ್ಯರು ಒಗ್ಗೂಡಿ ಪ್ರಶ್ನಿಸಲು ಮುಂದಾಗದ ಕಾರಣ ರಾಜ್ಯಕ್ಕೆ ಅನ್ಯಾಯವಾಗುವುದು ಖಚಿತ. ರಾಜ್ಯದ ಸಂಸದರು ತಮಿಳುನಾಡಿನ ರಾಜಕೀಯವನ್ನು ನೋಡಿ ಕಲಿಯಬೇಕು ಎಂದರು. ನೀರಾವರಿ ಸಲಹಾ ಸಮಿತಿ ರಚನೆಯಾದರೆ ರಾಜ್ಯದ ಕಾವೇರಿ ಕಣಿವೆಯಲ್ಲಿನ ಏತ ನೀರಾವರಿ ಯೋಜನೆಗಳು ಸ್ಥಗಿತಗೊಳ್ಳುವುದಲ್ಲದೆ, ನಾಲೆಗಳಲ್ಲಿ ನೀರ ಹಾಯಿಸುವಾಗ ಪ್ರತಿಯೊಂದನ್ನು ಅಳತೆ ಮಾಡಿ ಸಮಿತಿ ಒಪ್ಪಿಗೆ ಅಗತ್ಯವಾಗುತ್ತದೆ ಎಂದು ತಿಳಿಸಿದರು.
ಒಟ್ಟಾಗಿ ಹೋರಾಡಬೇಕು: ಕಾವೇರಿ ಕಣಿವೆಯಲ್ಲಿನ ರೈತರು ಮುಂದಿನ ದಿನಗಳಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬರಲಿದೆ. ತಮಿಳುನಾಡಿನಂತೆ ತಮ್ಮ ರಾಜ್ಯದ ಎಲ್ಲಾ ಸಂಸದರು ಒಗ್ಗಟ್ಟಾಗಿ ಹೋರಾಡುವುದೊಂದೆ ಬಾಕಿಯಿದೆ ಎಂದು ಅವರು ತಿಳಿಸಿದರು.
ರೈಲು ಪ್ರಯಾಣ ದರ ಏರಿಕೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಪರಿಣಾಮವನ್ನು ನಾವು ಬಿಜೆಪಿ ಸರ್ಕಾರದಲ್ಲಿ ನೋಡಬೇಕಾಗಿದೆ ಎಂದರು.