ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈಲು ಪ್ರಯಾಣ ದರ ಏರಿಕೆಗೆ ವಿರೋಧ

Mainashree
Updated On : 22 Jun 2014, 8:48 am

ಹಾಸನ: ರೈಲು ಪ್ರಯಾಣ ದರ ಹಾಗೂ ಸರಕು ಸಾಗಾಣಿಕೆ ದರ ಏರಿಕೆಯನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
 ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯ ಮುಂದೆ ಕೆಲ ಸಮಯ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಮೋದಿ ಸರ್ಕಾರ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರೈಲು ಪ್ರಯಾಣ ದರವನ್ನು ಶೇ.14.2ರಷ್ಟು ಹಾಗೂ ಸರಕು ಸಾಗಾಣೆ ದರವನ್ನು ಶೇ.6.5ರಷ್ಟನ್ನು ಏರಿಸಿರುವುದು ಖಂಡನೀಯ ಎಂದರು.
ಮತ್ತೆ ಬೆಲೆ ಹೆಚ್ಚಳ: ಇದು ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕಠೋರವಾದ ಬೆಲೆ ಏರಿಕೆ ಅನುಭವಿಸಿದ ದೇಶದ ದುಡಿಯುವ ಜನರ ಮೇಲಿನ ಕ್ರೂರ ದಾಳಿಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಮೋದಿಯವರು, ರೈಲು ಪ್ರಯಾಣಿಕರ ಮೇಲೆ ಬಹು ದೊಡ್ಡ ಹೊರೆ ಹೊರಿಸಿದ್ದಾರೆ. ಸರಕು ಸಾಗಾಣಿಕೆ ದರದಲ್ಲಿ ಏರಿಕೆಯಾಗಿರುವುದರಿಂದ, ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ ಎಂದು ಆರೋಪಿಸಿದರು.
 ಮೋದಿ ಸರ್ಕಾರ ಸಂಸತ್ತಿನ ಗಮನಕ್ಕೆ ತರದೆ ಇಂತಹ ಜನ ವಿರೋಧಿ ಕ್ರಮವನ್ನು ಕೈಗೊಂಡಿದೆ. ಅದೂ ಇನ್ನೇನು ಕೆಲವೇ ದಿನಗಳಲ್ಲಿ ರೇಲ್ವೆ ಬಜೆಟ್‌ಅನ್ನು ಸಂಸತ್ತಿನಲ್ಲಿ ಮಂಡಿಸುವ ಮುಂಚೆಯೇ ಈ ಜನ ವಿರೋಧಿ ಕ್ರಮ ಕೈಗೊಂಡಿದೆ. ಹಿಂದಿನ ಯುಪಿಎ ಸರ್ಕಾರ ಇಂತಹದೇ ಬಜೆಟ್ ಪೂರ್ವ ಬೆಲೆ ಏರಿಕೆ ಮಾಡಿದಾಗ ಬಿಜೆಪಿ ಅದನ್ನು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಖಂಡಿಸಿತ್ತು. ಆದರೆ ಈಗ ಬಿಜೆಪಿಯ ಮೋದಿ ಸರ್ಕಾರ ಅದೇ ಪ್ರಜಾಪ್ರಭುತ್ವ ವಿರೋಧಿ ದಾರಿ ತುಳಿದಿದೆ ಎಂದು ದೂರಿದರು.
ಹಿಂದಿ ಹೇರಿಕೆಗೆ ವಿರೋಧ: ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಮಾಹಿತಿಗಳನ್ನು ನೀಡಲು ಕೇವಲ ಹಿಂದಿ ಭಾಷೆಯನ್ನು ಮಾತ್ರ ಬಳಸಬೇಕೆಂಬ ಮೋದಿ ಸರ್ಕಾರದ ನಿರ್ಧಾರ ಭಾಷಾ ಸಮಾನತೆಗೆ ಹಾಗೂ ಇತರೆ ರಾಷ್ಟ್ರೀಯ ಭಾಷೆಗಳಿಗೆ ವಿರುದ್ಧವಾಗಿದೆ. ಇದು ಹಿಂದಿ ಏರಿಕೆಯ ಹುನ್ನಾರವಾಗಿದೆ. ಇದನ್ನು ಸಿಪಿಎಂ ತೀರ್ವವಾಗಿ ವಿರೋಧಿಸುತ್ತದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ಭಾಷೆ ಹಾಗೂ ಪ್ರದೇಶಕ್ಕೆ ಪ್ರಾತಿನಿದ್ಯವಿದೆ.
 ಏಕ ಭಾಷೆ, ಏಕ ಸಂಸ್ಕೃತಿಗೆ ನಮ್ಮ ಒಕ್ಕೂಟದಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಸರ್ಕಾರ ಕೂಡಲೆ ಈ ನೀತಿಯನ್ನು ಬದಲಾಯಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಜೊತೆಗೆ ದೇಶದ ಇತರೆ ಭಾಷೆಗಳು ಹಾಗೂ ಇಂಗ್ಲೀಷ್ ಬಳುಸುವಂತೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.                                                                    ಧರ್ಮೇಶ್, ಜಿ.ಪಿ.ಸತ್ಯನಾರಾಯಣ, ಎಚ್.ಆರ್.ನವೀನ್ ಕುಮಾರ್, ಎಂ.ಜಿ.ಪೃಥ್ವಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement