ಹೊಳೆನರಸೀಪುರದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ
ಹೊಳೆನರಸೀಪುರ: ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಪಟ್ಟಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ಭಾನುವಾರಂದು ಭೂಮಿಪೂಜೆ ನೆರವೇರಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿಯಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ನಿರ್ಮಿಸಲಿರುವ ವಿದ್ಯಾರ್ಥಿ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿದ ರೇವಣ್ಣ, ಭೂಸೇನಾ ನಿಗಮದ ವತಿಯಿಂದ ಆರ್‌ಐಡಿಎಫ್ ಯೋಜನೆಯಡಿಯಲ್ಲಿ 99 ಲಕ್ಷ ಅನುದಾನದಲ್ಲಿ ನಿರ್ಮಿಸಲಿರುವ ವಿದ್ಯಾರ್ಥಿನಿಲಯವು ಗ್ರಾಮೀಣ ಭಾಗದಿಂದ ಪದವಿ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಕ್ರೀಡಾಂಗಣ ವಿಸ್ತರಣೆ: ಈ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಕದಲ್ಲಿನ ಹೇಮಾವತಿ ಕ್ರೀಡಾಂಗಣದ ಬಳಿಯಲ್ಲಿ ಸ್ಥಳವನ್ನು ಗುರುತಿಸಲಾಗಿತ್ತಾದರೂ, ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳ ಉನ್ನತೀಕರಣಕ್ಕೆ ಕ್ರೀಡಾಂಗಣವನ್ನು ಉನ್ನತಿಗೇರಿಸುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡವಿದ್ದಲ್ಲಿ ತೊಂದರೆಯಾಗಬಹುದು ಎನ್ನುವ ಕಾರಣದಿಂದ ಬಿಸಿಎಂ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿನ ಖಾಲಿ ನಿವೇಶನದಲ್ಲಿ ವಿದ್ಯಾರ್ಥಿ ನಿಲಯದ ಕಾಮಗಾರಿ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಭೂಸೇನಾ ನಿಗಮದ ಎಇಇ ಶ್ರೀನಿವಾಸರಂಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಬಿ.ಇರ್ಷಾದ್, ಎಂಜಿನಿಯರ್ ಜ್ಯೋತಿ ಮೊದಲಾದವರು ಹಾಜರಿದ್ದರು.