ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಲ್ಲಿ ಒಳಚರಂಡಿ ತ್ಯಾಜ್ಯಗಳದ್ದೇ ದರ್ಬಾರು

Mainashree
Updated On : 23 Jun 2014, 9:38 am

ಚನ್ನರಾಯಪಟ್ಟಣ: ಜಿಲ್ಲೆಯಲ್ಲಿಯೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಚನ್ನರಾಯಪಟ್ಟಣದಲ್ಲಿ  ಅದಕ್ಕಿಂತ ಹೆಚ್ಚು ವೇಗದಲ್ಲಿ ಸಮಸ್ಯೆಗಳು ಬೆಳೆಯುತ್ತಿರುವುದು ಪುರಸಭೆಗೆ ಗೋಚರವಾದರೂ ಅದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ.
ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸುರಿಮಳೆಯೇ ಇದ್ದರೂ ಪುರಸಭೆಯ ಅಧಿಕಾರಿಗಳು ಹಾಗೂ ನೌಕರರು ಮಾತ್ರ ಈ ಬಗ್ಗೆ ಗಮನ ಹರಿಸದೆ ಕೇವಲ ರಾಜಕೀಯ ಒತ್ತಡವಿರುವ ಹಾಗೂ ಗಣ್ಯರ ಸಮಸ್ಯೆಗಳನ್ನು ಮಾತ್ರ ಬಗೆಹರಿಸುವಲ್ಲಿ ಮುಂದಾಗಿದ್ದು, ಸಾಮಾನ್ಯ ಜನತೆ ಇವರಿಗೆ ಲೆಕ್ಕಕ್ಕಿಲ್ಲದಂತಾಗಿದ್ದಾರೆ.
ಮ್ಯಾನ್‌ಹೋಲ್ ಅವ್ಯವಸ್ಥೆ: ಪಟ್ಟಣದ ಎಲ್ಲಾ ಬಡಾವಣಗಳಲ್ಲಿಯೂ ಒಳಚರಂಡಿಯ ಅವ್ಯವಸ್ಥೆ ಅಲ್ಲಿನ ವಾಸಿಗಳಿಗೆ ತಲೆನೋವಾಗಿದ್ದು, ಕೆಲವೆಡೆಗಳಲ್ಲಿ ಒಳಚರಂಡಿ ನಿರ್ವಹಣೆಯಿಲ್ಲದೆ ಸ್ಥಗಿತಗೊಂಡು ಮ್ಯಾನ್‌ಹೋಲ್ ಮುಖೇನ ಉಕ್ಕಿ ಹರಿಯುವುದು, ಮ್ಯಾನ್ ಹೋಲ್‌ಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ವಾಹನ ಚಾಲಕರು ಪರದಾಡುವುದು ಬಹುತೇಕವಾಗಿ ಕಾಣ ಸಿಕ್ಕಿದರೂ ಪುರಸಭೆ ನೌಕರರಿಗೆ ಇದು ಕಾಣುತ್ತದೆಯೋ ಅಥವಾ ಕಂಡರೂ ಕಾಣದಂತೆ ಇರುತ್ತಾರೆಯೋ ತಿಳಿಯದಾಗಿದೆ.
 ಬಾಗೂರು ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ರಸ್ತೆಯ ಮಧ್ಯದಲ್ಲಿಯೇ ಹೊಸದಾಗಿ ನಿರ್ಮಿಸಿರುವ ಒಳಚರಂಡಿ ಮಾರ್ಗ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯಲ್ಲಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳು ರಸ್ತೆಯ ಮಟ್ಟದಿಂದ ಒಂದು ಅಡಿ ಎತ್ತರದಿಂದ ಕೂಡಿರುವುದರಿಂದ ವಾಹನ ಚಾಲಕರಿಗೆ ತಲೆ ನೋವಾಗಿದೆ.
6 ತಿಂಗಳಿಂದ ದುರಸ್ತಿ ಇಲ್ಲ: ಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಹೋಗುವ ಮಾರ್ಗದಲ್ಲಿ ಎಸ್.ಬಿ.ಜಿ ಪೆಟ್ರೋಲ್ ಬಂಕ್ ಬಳಿ ಮ್ಯಾನ್‌ಹೋಲ್ ಒಡೆದು ಒಳಚರಂಡಿ ನೀರು ಕಳೆದ 6ತಿಂಗಳಿಂದ ಉಕ್ಕಿ ಹರಿಯುತ್ತಿದ್ದರೂ ಈ ಬಗ್ಗೆ ಪುರಸಭೆಯಾಗಲೀ ಅಥವಾ ಕಾಮಗಾರಿಯನ್ನು ಪೂರ್ಣಗೊಳಿಸಿ ನಿರ್ವಹಣೆಯ ಸಮಯದ ಹೊಣೆ ಹೊತ್ತಿರುವ ಗುತ್ತಿಗೆದಾರ ಸರಿಪಡಿಸದಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಒಳಚರಂಡಿ ನೀರಿನ ಮೇಲೆಯೇ ಸಂಚರಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಕಳೆದ 12ವರ್ಷಗಳಿಂದ ಡಾಂಬರು ಹಾಗೂ ನಿರ್ವಹಣೆ ಕಾಣದ ರಸ್ತೆಗಳಲ್ಲಿ ಡಾಂಬರು ಹಾಳಾಗಿ ಜಲ್ಲಿಗಳು ಎದ್ದಿದ್ದರೂ ಅವುಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಇದರ ಜತೆಗೆ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಯದಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಸಂಪೂರ್ಣ ರಸ್ತೆಯಲ್ಲಿಯೇ ಹರಿಯುವುದರಿಂದ ರಸ್ತೆಗಳು ಹಾಳಾಗುತ್ತಿದ್ದರೂ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸದೆ ಹೊಸ ಹೊಸ ಯೋಜನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ತೆರಿಗೆ ನೀಡದೆ ಸೌಲಭ್ಯ: ಪಟ್ಟಣದ ಪುರಸಭೆಯ ಸೌಲಭ್ಯ ಪಡೆಯುತ್ತಿರುವ ಪ್ರಮುಖ ಉದ್ದಿಮೆದಾರರು ತಮ್ಮ ಪರವಾನಗಿ ಹಣವನ್ನು ಗ್ರಾಮ ಪಂಚಾಯಿತಿಗೆ ನೀಡುತ್ತಾ ಬಂದಿದ್ದರೂ ಇತ್ತ ಪುರಸಭೆಯ ಅಧಿಕಾರಿಗಳು ಗಮನ ಹರಿಸದಿರುವುದರಿಂದ ಆದಾಯದ ಮೂಲ ಕಡಿಮೆಯಾಗುತ್ತಿದೆ.
ನಾಲ್ಕು ಕಲ್ಯಾಣ ಮಂಟಪಗಳು, ಎರಡು ಚಿತ್ರಮಂದಿರಗಳು, ಹಲವು ಹೊಟೇಲ್, ಎಂಜನಿಯರಿಂಗ್ ಶಾಂಪ್‌ಗಳು ಸೇರಿದಂತೆ ಹಲವು ಉದ್ದಿಮೆಗಳನ್ನು ಪ್ರಾರಂಭಿಸಿರುವ ಮಾಲಿಕರು ಪಟ್ಟಣದ ಪುರಸಭೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದು ಅದಕ್ಕೆ ನೀಡಬೇಕಾಗಿರುವ ಕಂದಾಯವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿದ್ದಾರೆ. ಪಟ್ಟಣದಲ್ಲಿನ ಅವ್ಯವಸ್ಥೆಯ ಕುರಿತು ಪುರಸಭಾ ಸದಸ್ಯ ಪ್ರಕಾಶ್ ಪ್ರತಿಕ್ರಿಯಿಸಿ ಪಟ್ಟಣದಲ್ಲಿನ ಒಳಚರಂಡಿ ಅವ್ಯವಸ್ಥೆಯಾಗಲು ಪುರಸಭೆಯ ಅಧಿಕಾರಿಗಳು ಮುಖ್ಯ ಕಾರಣ. ಗುತ್ತಿಗೆದಾರರಿಂದ ಕಾಮಗಾರಿಯನ್ನು ತಾವು ಹಸ್ತಾಂತರಿಸಿಕೊಳ್ಳುವ ಮೊದಲು ಅದನ್ನು ಪರಿಕ್ಷೆ ಮಾಡದಿರುವುದು. ಯಾರದೋ ಒತ್ತಡಕ್ಕೆ ಮಣಿದು ತಮ್ಮ ವಶಕ್ಕೆ ಪಡೆದು ನಂತರದಲ್ಲಿ ನಿರ್ವಹಣೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾದಿಹಳ್ಳಿ ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement