ಜನಪದ ಕಲೆ ಉಳಿಸಿ ಬೆಳೆಸಬೇಕು
ಹೊಳೆನರಸೀಪುರ: ತಾಯಿ ಮತ್ತು ಗುರುವಿನ ಸಂಬಂಧದ ಮಹತ್ವ ಜನಪದ ಸಂಸ್ಕೃತಿಯಲ್ಲಿದ್ದು, ಹಳ್ಳಿಯ ಹೆಣ್ಣು ಮಕ್ಕಳು ಹಾಗೂ ರೈತಾಪಿ ಜನರಿಂದ ಜನಪದ ಬಾಯಿಂದ ಬಾಯಿಗೆ ಹರಿದುಬಂದಿದ್ದು, ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದು ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಸ್.ಪ್ರಭುಶಂಕರ್ ವಿಷಾದಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕವು ತಾಲೂಕಿನ ಬಾಗೀವಾಳು ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಗೀತೆಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸನಾತನ ಸಂಸ್ಕೃತಿಯಾದ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಜನಪದ ಕಲೆ ಮತ್ತು ಸಾಹಿತ್ಯವನ್ನು ನಾವೆಲ್ಲರೂ ಮುಂದಿನ ತಲೆಮಾರಿಗೂ ಜತನದಿಂದ ಕಾಯ್ದುಕೊಳ್ಳಬೇಕಿದೆ ಎಂದರು.
ಹಳ್ಳಿಗಳಲ್ಲಿ ಏರ್ಪಡಿಸಿ: ಪ್ರಾಸ್ತಾವಿಕ ಭಾಷಣ ಮಾಡಿದ ಪರಿಷತ್ತಿನ ಅಧ್ಯಕ್ಷ ಬಾ.ರಾ.ಸುಬ್ಬರಾಯ, ಗ್ರಾಮೀಣ ಸೊಗಡಿನ ಜನಪದ ಹಳ್ಳಿಯೇ ಮೂಲವಾಗಿರುವುದರಿಂದ ಪ್ರತಿ ಹಳ್ಳಿಗಳ ಶಾಲೆಗಳಲ್ಲಿ ಜಾನಪದ ನೃತ್ಯ, ಗೀತೆ ಹಾಗೂ ಸ್ಪರ್ಧೆಗಳನ್ನು ನಡೆಸುವುದರಿಂದ ಜಾನಪದ ಗೀತೆಗಳು ಬಹಳ ಯಶಸ್ವಿಯಾಗುತ್ತಿವೆ ಎಂದರು.
ಶಿಕ್ಷಕ ಎಂ.ಜಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಬಿ.ಸಿ.ವೀರಪ್ಪಾಜಿ ಮಾತನಾಡಿದರು. ಎಚ್.ಆರ್.ವೀರಬಸಪ್ಪ ಅಳಿಯ ದೇವರು ನಾಟಕದ ಏಕಪಾತ್ರಾಭಿನಯಿಸಿ ರಂಜಿಸಿದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಮಂಜುನಾಥ್ ಮಾತನಾಡಿದರು. ಪರಿಷತ್ತಿನ ಖಜಾಂಚಿಯಾದ ಜಿ.ಪಿ.ಮಂಜುನಾಥಗುಪ್ತ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿನಾಗರಾಜ್ ಸ್ಪರ್ಧೆಯ ವಿವರಣೆ ನೀಡಿದರು.
ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ 9 ನೇ ತರಗತಿಯ ದಿವ್ಯಾ ಪ್ರಥಮ, 10 ನೇ ತರಗತಿಯ ಹೇಮಾ ದ್ವಿತೀಯ, 9ನೇ ತರಗತಿಯ ರಶ್ಮಿ ತೃತೀಯ ಬಹುಮಾನಪಡೆದರೆ, ಸಮಾಧಾನ ಬಹುಮಾನವನ್ನು ವೇದಾವರಿ ಬಿ.ಜಿ., ದಿವ್ಯಾ, ಪ್ರಿಯಾಂಕ ಪಡೆದುಕೊಂಡರು.