ಪರಿಶಿಷ್ಟರು ನೀಡುವ ಹಾಲಿಗೆ ರು. 2 ಹೆಚ್ಚುವರಿ ಪ್ರೋತ್ಸಾಹ ಧನ: ಪ್ರತಿಭಟನೆ
ಅರಸೀಕೆರೆ: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಟುಂಬಗಳಿಂದ ಮಾತ್ರ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಸರ್ಕಾರ ಎರಡು ರು. ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಕ್ರಮ ಸರಿಯಲ್ಲ ಎಂದು ತಾಲೂಕಿನ ಮಾಡಾಳು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಕಚೇರಿ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ ಸದಸ್ಯರು ಪ್ರತಿಭಟನೆ ನಡೆಸಿದರು. ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ತಂದ 50 ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಂಘದ ಸದಸ್ಯರು ಕಚೇರಿ ಮುಂದೆ ಸೇರಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ಎಲ್ಲರಂತೆ ಸರ್ಕಾರ ಯಾವುದೇ ಜಾತಿ ಭೇದಭಾವನೆಗಳು ಇಲ್ಲದೆ ಸಮಾನವಾಗಿ ಎಲ್ಲರಿಗೂ ಎರಡು ರುಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಉದ್ದೇಶಿಸಿ ಸದಸ್ಯ ಎಂ.ಎಂ. ಯೋಗೀಶ್ ಮಾತನಾಡಿದ ಜಾತ್ಯತೀತ ಮುಖವಾಡ ಹೊತ್ತ ಕಾಂಗ್ರೆಸ್ ಸರ್ಕಾರ ಜಾತಿ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದೆ. ಎಲ್ಲಾ ಜಾತಿಗಳಲ್ಲೂ ಬಡವರು ಹಾಗೂ ಆರ್ಥಿಕ ದುರ್ಬಲ ವರ್ಗದವರು ಇದ್ದಾರೆ. ಆದರೆ ಸರ್ಕಾರ ಒಂದು ವರ್ಗಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದೆ ಎಂದು ಅವರು ಆರೋಪಿಸಿದರು. ವನಕಟ್ಟದ ಮರುಳಯ್ಯ, ಸುಧೀರ್, ತಿಪ್ಪೇಸ್ವಾಮಿ, ಯರೇಹಳ್ಳಿ ಮಲ್ಲಯ್ಯ, ಸುರೇಶ್, ಮಲ್ಲಿಕಾರ್ಜುನ್, ಹಾಲಾರಾಧ್ಯ ಇದ್ದರು.