ಧೂಳು ಎಬ್ಬಿಸುತ್ತಿರುವ ಸಿಮೆಂಟ್ ಕಾರ್ಖಾನೆ ಮಾನ್ಯತೆ ರದ್ದು ಮಾಡಿ
ಅರಸೀಕೆರೆ: ಪಟ್ಟಣದ ಹುಳಿಯಾರು ರಸ್ತೆಯಿಂದ ತಿರುಪತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಸಿಮೆಂಟ್ ಉತ್ಪನ್ನಗಳ ಕೈಗಾರಿಕ ಘಟಕ ಸ್ಥಾಪನೆಯಾಗಿದ್ದು, ಇದರಿಂದ ಹೊರಬರುವ ತ್ಯಾಜ್ಯ ಹಾಗೂ ಧೂಳಿನಿಂದ ತಿರುಪತಿ ಗ್ರಾಮದ ಜನತೆ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ತಾಲೂಕು ಆಡಳಿತ ಕಾರ್ಖಾನೆಯ ಮಾನ್ಯತೆ ನವೀಕರಣ ಮಾಡಕೂಡದು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ವರದಶ್ರೀ ಎಂಬ ಈ ಕೈಗಾರಿಕಾ ಘಟಕ ಗ್ರಾಮದ ಸಮೀಪವೇ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಗ್ರಾಮದ ಜನತೆ ರಾತ್ರಿವೇಳೆಯಲ್ಲಿಯೂ ನಿದ್ರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಸಿಮೆಂಟ್, ಇಟ್ಟಿಗೆ, ವಿದ್ಯುತ್ ಕಂಬಗಳ ತಯಾರಿಕೆಯಲ್ಲಿ ತೊಡಗಿರುವ ಘಟಕ ಸರ್ಕಾರದ ನಿಯಮಗಳನ್ನು ಉಲ್ಲಂಘಿಸತೊಡಗಿದೆ. ರಾತ್ರಿಯಿಡೀ ಹೊರಬರುವ ಧೂಳು, ಶಬ್ಧಮಾಲಿನ್ಯದಂತಹ ವಾತಾವರಣದಿಂದ ಜನರು ನಿತ್ಯವೂ ಒಂದಿಲ್ಲೊಂದು ರೋಗಗಳಿಗೆ ತುತ್ತಾಗತೊಡಗಿದ್ದಾರೆ.
ಆದ್ದರಿಂದ ಕಾರ್ಖಾನೆಯನ್ನು ಸ್ಥಳಾಂತರಿಸಬೇಕು. ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಈ ಪ್ರದೇಶದಲ್ಲಿ ಕಾರ್ಖಾನೆ ನಡೆಸಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಮಾನ್ಯತೆ ನವೀಕರಿಸಲು ಮುಂದಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.