ರಕ್ತದಾನ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕು
ಹಾಸನ: ರಕ್ತದಾನ ಮಹಾದಾನ. ಇದರಿಂದ ಒಂದು ಜೀವ ಉಳಿಯಲು ಸಾಧ್ಯ. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ. ಆರೋಗ್ಯ ಚೇತರಿಕೆಗೆ ಸಾಧ್ಯ. ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಕರೆ ನೀಡಿದರು.
ನಗರದ ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯ, ಶ್ರೀ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆ, ಹಾಸನ, ರೆಡ್ ರಿಬ್ಬನ್ ಕ್ಲಬ್, ಹಾಸನ ಮತ್ತು ರಕ್ತ ನಿಧಿ ಕೇಂದ್ರಗಳು ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಮತ್ತು ಬ್ಲಡ್ ಮೊಬೈಲ್ ಬಸ್ಸಿನಲ್ಲಿ ಬೃಹತ್ ರಕ್ತದಾನ ಶಿಬಿರ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಿವು ಅಗತ್ಯ: ಆರೋಗ್ಯವಂತ ಯುವಕರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು. ಇದರಿಂದ ಆರೋಗ್ಯದ ಮೇಲೆ ಯಾವುದೇ ತೊಂದರೆಯಾಗದೆ ಹೊಸ ಚೇತನವನ್ನು ಹೊಂದಲು ಸಾಧ್ಯ.
ಯುವಕರ ರಕ್ತದಲ್ಲಿ ಹೆಚ್ಚು ಪೌಷ್ಟಿಕತೆ ಇರುವುದರಿಂದ ಇದನ್ನು ಹೆಚ್ಚು ಕಾಲ ಶೇಖರಿಸಿಟ್ಟು ಅಗತ್ಯತೆಗೆ ಅನುಗುಣವಾಗಿ ಬಳಸುವುದರಿಂದ ರಕ್ತದ ಅವಶ್ಯಕತೆ ಇರುವವರಿಗೆ ಸಹಾಯ ಮಾಡಿದಂತಾಗುತ್ತದೆ. ಯುವಕರಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಅರಿವು ಮೂಡಿಸಲು ಹಾಗೂ ಸ್ವಯಂ ಪ್ರೇರಿತ ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ಇಂದಿನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಸುಸಜ್ಜಿತ ಬಸ್ಸಿನಲ್ಲಿ ಅಳವಡಿಸಿರುವ ಆಸನದಲ್ಲಿ ಕುಳಿತು ರಕ್ತದಾನ ಮಾಡುವುದರ ಮೂಲಕ ಬೃಹತ್ ರಕ್ತದಾನದ ಶಿಬಿರಕ್ಕೆ ಚಾಲನೆ ನೀಡಿದರು.
ರಕ್ತದಾನ ಮಾಡಿ: ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪಿ.ಎಲ್.ನಟರಾಜ್ ಪ್ರಾಸ್ತಾವಿಕ ಭಾಷಣ ಮಾಡಿ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ 8 ಸ್ಥಳಗಳಲ್ಲಿ ರಕ್ತದಾನದ ಕೇಂದ್ರಗಳನ್ನು ತೆರೆದಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮೂಲಕ ಸಂಗ್ರಹಿಸಲಾದ ರಕ್ತವನ್ನು ಬೇಡಿಕೆಗೆ ಅನುಗುಣವಾಗಿ ಬಳಸಲಾಗುತ್ತಿದೆ. ಯುವಕರು ಹೆಚ್ಚು ಆಸಕ್ತಿ ವಹಿಸಿ ರಕ್ತದಾನ ಮಾಡುವುದರ ಮೂಲಕ ನೊಂದವರಿಗೆ ಸಹಾಯ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬಹುದು ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಬಾರಿ ರಕ್ತ ದಾನ ಮಾಡಿದವರಲ್ಲಿ 36 ಬಾರಿ ರಕ್ತ ದಾನ ಮಾಡಿದ ಜಿಲ್ಲೆಯ ಸುದೀಪ್ ಮತ್ತು 51 ಬಾರಿ ರಕ್ತದಾನ ಮಾಡಿದ ದಾವಣಗೆರೆ ಜಿಲ್ಲೆಯ ಶಿವಕುಮಾರ್ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಓ ಉಪೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ಯಾಮಲಾದೇವಿ, ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಭಾರ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಪ್ರಭಾರ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ವೈದ್ಯಾಧಿಕಾರಿಗಳಾದ ಡಾ. ಎಚ್.ಆರ್. ದೇವರಾಜ್, ಡಾ. ಪುರುಷೋತ್ತಮ್ ಇದ್ದರು.