ಲಾರಿ- ಬೈಕ್ ಡಿಕ್ಕಿ: ಇಬ್ಬರ ಸಾವು
ಸಕಲೇಶಪುರ: ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಇದ್ದ ಇಬ್ಬರು ಸವಾರರೂ ಮೃತಪಟ್ಟ ಘಟನೆ ತಾಲೂಕಿನ ಬಾಳ್ಳುಪೇಟೆ ಆಸ್ಪತ್ರೆಯ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ ಗ್ರಾಮದ ರಾಕೇಶ (22) ಹಾಗೂ ಹೆತ್ತೂರು ಹೋಬಳಿಯ ಬೊಮ್ಮನಕೆರೆಯ ವಾಸಿ ರೇಣುಕ (22) ಮೃತಪಟ್ಟ ದುರ್ದೈವಿಗಳು. ರಾಕೇಶ ಅವರು ತಮ್ಮ ಬೈಕಿನಲ್ಲಿ ಸ್ನೇಹಿತ ರೇಣುಕ ಅವರನ್ನು ಕೂರಿಸಿಕೊಂಡು ಬಾಳ್ಳುಪೇಟೆ ಕಡೆಗೆ ಹೋಗಲು ಬಾಳ್ಳುಪೇಟೆ ಆಸ್ಪತ್ರೆ ಕ್ರಾಸ್ಬ್ ಬಳಿ ಹೋಗುತ್ತಿರುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ರಾಕೇಶ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ರೇಣುಕ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಟ್ಕಾ ಆಡಿಸುತ್ತಿದ್ದವನ ಬಂಧನ: ಹಾಸನದ ಕಟ್ಟಿನಕೆರೆ ಮಾರ್ಕೇಟ್‌ನ ಮೆಟ್ಟಿಲುಗಳ ಹತ್ತಿರ ಮಟ್ಕಾ ಆಡಿಸುತ್ತಿದ್ದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಲೂರು ತಾಲೂಕು ಸುಳುಗೋಡು ಗ್ರಾಮದ ಅನುಕುಮಾರ್ (18) ಎಂಬಾತನೇ ಬಂಧಿತ ಆರೋಪಿ. ನಗರ ಠಾಣೆಯ ಪಿಎಸ್‌ಐ ಕುಮಾರ್ ಅವರು ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಿ ರು. 520 ನಗದು ಮತ್ತು ಒಂದು ನೋಕಿಯಾ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.