ಸೋಲನ್ನು ಸವಾಲಾಗಿ ಸ್ವೀಕರಿಸಿ ಗುರಿ ಮುಟ್ಟಲು ಸಾಧ್ಯ: ಮೋಹನ್
ಹಾಸನ: ಸೋಲನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಆಲೋಚನೆಯಿಂದ ಮುನ್ನಡೆದರೆ ಮಾತ್ರ ಗುರಿ ಸಾಧನೆ ಸಾಧ್ಯ ಎಂದು ಪರಿಸರವಾದಿ ಎಚ್.ಪಿ. ಮೋಹನ್ ಹೇಳಿದರು.
ನಗರದ ಶ್ರೀಮತಿ ಬಿಳಿಯಮ್ಮ ಈರೇಗೌಡ (ಬಿ.ಈ.ಜಿ) ಪದವಿಪೂರ್ವಕಾಲೇಜಿನಲ್ಲಿ ಸೋಮವಾರ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥ್ಥಿಗಳಿಗೆ ಉಚಿತ ತರಗತಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸೋಲಿನಿಂದ ಕುಗ್ಗಬೇಡಿ: ದೊಡ್ಡ ದೊಡ್ಡ ಸಾಧನೆ ಮಾಡಿರುವವರೆಲ್ಲಾ ಬದುಕಿನ ಒಂದು ಹಂತದಲ್ಲಿ ಸೋಲುಂಡವರೇ ಆಗಿದ್ದಾರೆ. ಆದರೆ ಅವರು ಸೋಲಿನಿಂದ ಕುಗ್ಗದೆ ಸತತ ಪ್ರಯತ್ನದಿಂದ ಮೇಲೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು. ಅಂತಹ ವ್ಯಕ್ತಿಗಳನ್ನು ಆದರ್ಶವನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಬಿ.ಈ.ಜಿ. ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿ, ಗುರಿ ಸಾಧನೆಗೆ ಅರ್ಪಣಾ ಮನೋಭಾವ, ಸಮಯಪ್ರಜ್ಞೆ, ಪ್ರಾಮಾಣಿಕತೆ ಮತ್ತು ಏಕಾಗ್ರತೆ ಅಗತ್ಯ ಎಂದು ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಬಿ. ಮರೀಗೌಡ, ಬಿ.ಈ.ಜಿ. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಹೆಚ್.ಎ. ರೇಖಾ ಸ್ವಾಗತಿಸಿದರು. ಬಿ.ಈ.ಜಿ. ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಅಜಿತ್ ಪ್ರಸಾದ್ ಮಾತನಾಡಿದರು. ಉಪನ್ಯಾಸಕರಾದ ವಿಂದ್ಯಾ, ಮಮತಾರಾಣಿ, ಜೈಕುಮಾರ್, ಸಮೀನಾ ತಾಜ್, ಅಂಜುಂ ಬಾನು ಮತ್ತು ತೌಸಿಫ್ ಅಹಮ್ಮದ್ ಇದ್ದರು.