ಆತ್ಮಶುದ್ಧಿ ಅಗತ್ಯ: ಆದಿಶ್ರೀ
ಕ.ಪ್ರ.ವಾರ್ತೆ ಟ ಹಾಸನ ಟ ಜೂ. 25
ಮತಿ ಶುದ್ಧವಾಗಿದ್ದರೆ ಬದುಕಿನ ಗತಿಯೂ ಉತ್ತಮವಾಗಿರುತ್ತದೆ. ಬುದ್ಧಿ ಕಲುಷಿತಗೊಂಡಿದ್ದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ತಪ್ಪು ಹಾದಿಗೆ ಕೊಂಡೊಯ್ಯುತ್ತವೆ. ಆದ್ದರಿಂದ ಪ್ರತಿಯೊಬ್ಬರಿಗೂ ಆತ್ಮಶುದ್ಧಿ ಆಗತ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾತ್ರಿ ಸಾಮೂಹಿಕ ಗುರುವಂದನೆ ಮತ್ತು ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿ ತೋರಿಕೆ ಆಗಬಾರದು. ನಮ್ಮ ನಡವಳಿಕೆ ಪ್ರಾಮಾಣಿಕವಾಗಿದ್ದರೆ ಕೊಳೆಯ ಜಾಗದಲ್ಲೂ ಬೆಳೆ ಬೆಳೆಯುತ್ತದೆ. ಆಲ್ಪಾಯುವಾಗಿ ಹುಟ್ಟಿದ ಮಾರ್ಕಾಂಡೇಯ ಶುದ್ಧ ಭಕ್ತಿಯಿಂದಾಗಿ ಚಿರಂಜೀವಿಯಾದ. ಕಷ್ಟ ಬಂದಾಗ ಮಾತ್ರ ದೇವರ ಮೊರೆ ಹೋಗುವ ಅಲ್ಪತನ ಬಿಟ್ಟು ಸದಾ ಕಾಲ ದೇವರ ಸ್ಮರಣೆಯಿಂದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಕೆ.ಆರ್. ನಗರ ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸದ್ಗತಿಗೆ ಗುರುಕೃಪೆ ಅಗತ್ಯ. ದೇಹವೆಂಬ ರಥಕ್ಕೆ ಬುದ್ಧಿಯೇ ಸಾರಥಿ. ಆ ಬುದ್ಧಿಯನ್ನು ನೆಟ್ಟಗಿಟ್ಟುಕೊಳ್ಳುವುದೇ ಸಂಸ್ಕಾರ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಕಾರ್ಯದಶಿಶ್ರೀ ಶಂಭುನಾಥ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶ್ರೀ ಮಠದ ವ್ಯವಸ್ಥಾಪಕ ಹೆಚ್.ಕೆ. ಚಂದ್ರಶೇಖರ್ ದಂಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸುವ ಮೂಲಕ ಸಾಮೂಹಿಕ ಗುರುವಂದನೆ ಮತ್ತು ಅಭಿನಂದನೆ ಕಾರ್ಯ ಆರಂಭಿಸಲಾಯಿತು.
ಕುಂದೂರು ಮಠದ ಶ್ರೀ ರಾಮಯ್ಯ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ರಾಮನಗರ ಶಾಖಾ ಮಠದ ಶ್ರೀ ಅನ್ನದಾನಿನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಶ್ರೀ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಮಾಜಿ ಅಧ್ಯಕ್ಷ ಹೆಚ್.ಬಿ. ಮದನಗೌಡ ಹಾಗೂ ಸಮಾಜದ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.