ದಿನಗೂಲಿ ನೌಕರರ ಧರಣಿ
ಹಾಸನ: ದಿನಗೂಲಿ ಮತ್ತು ಕಾಯಂ ನೌಕರರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ರಾಜ್ಯ ಸರ್ಕಾರಿ ನೌಕರರ ಮಹಾಮಂಡಲದಿಂದ ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ಅನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಲಾಗುತ್ತಿರುವ ಎಲ್ಲಾ ಅರ್ಹ ದಿನಗೂಲಿ ನೌಕರರ ಹೆಸರುಗಳನ್ನು ಒಂದು ವರ್ಷದ ಒಳಗೆ ಸೂಚಿಸಬೇಕೆಂದು ನಿಗದಿಗೊಳಿಸಲಾಗಿದೆ. ಅವಧಿ ಮುಗಿದಿದ್ದರೂ ಇದುವರೆಗೂ ಕೆಲಸ ಮಾಡುವ ಅರ್ಹ ನೌಕರರ ಹೆಸರು ಸೂಚಿಸಲಾಗಿರುವುದಿಲ್ಲ ಎಂದು ಖಂಡಿಸಿದರು.
ನಿಯಮ ಉಲ್ಲಂಘನೆ: ಸೇವೆ ಸಲ್ಲಿಸಿರುವ ನೌಕರರು ಈಗ ಹತಾಶೆಗೊಂಡಿದ್ದಾರೆ. ಸರ್ಕಾರವೇ ಹೊರಡಿಸಿದ ಕ್ಷೇಮಾಭಿವೃದ್ಧಿ ಅಧಿನಿಯಮವನ್ನು ತಾನೇ ಉಲ್ಲಂಘಿಸಿದೆ ಎಂದು ಆರೋಪಿಸಿದರು. ಸರಕಾರದ ಈ ವಿಳಂಬ ನೀತಿಯಿಂದ ಅನೇಕ ನೌಕರರು ನಿವೃತ್ತಗೊಂಡಿದ್ದು, ಮತ್ತೆ ಇತರರು ಸಾವನಪ್ಪಿದ್ದಾರೆ. ಈಗಲಾದರೂ ಸರ್ಕಾರ ಮನಗೊಂಡು ಕ್ಷೇಮಾಭಿವೃದ್ಧಿ ಅಧಿನಿಯಮ 2012ನ್ನು ಜುಲೈ 7ರ ಒಳಗೆ ಜಾರಿಗೊಳಿಸಬೇಕು ಇಲ್ಲವಾದರೇ ಮಹಾಮಂಡಲದಿಂದ ವಿಧಾನಸೌಧದ ಮುಂದೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಲಾಯಿತು.
ನವಿಲೆ ಆಸ್ಪತ್ರೆಗೆ ವೈದ್ಯರು ನೇಮಕ: ಭರವಸೆ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಅಣತಿ ನವಿಲೆ ಗ್ರಾಮಪಂಚಾಯಿತಿ ಕಚೇರಿಗೆ ಮಂಗಳವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಿವಶಂಕರ್ ಕುಂಟೆ ಅವರು ಭೇಟಿ ನೀಡಿ ಎಸ್.ಸಿ.ಎಸ್.ಟಿ. ಜನಾಂಗಕ್ಕೆ ಗ್ರಾಮ ಪಂಚಾಯಿತಿಯಿಂದ ದೊರೆಕಿರುವ ಸೌಲಭ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು.
ನವಿಲೆ ಗ್ರಾಮ ಪಂಚಾಯ್ತಿಯಲ್ಲಿ ಶೌಚಾಲಯಕ್ಕೆ ಮೀಸಲಾದ 3 ಲಕ್ಷ ಹಣದಲ್ಲಿ 2 ಲಕ್ಷ ರು.ಗಳನ್ನು ಫಲಾನುಭವಿಗಳಿಗೆ ಯಾಕೆ ಕೊಟ್ಟಿಲ್ಲ ಎಂದು ಪಿಡಿಓ ಅವರನ್ನು ಪ್ರಶ್ನಿಸಿದರು.
ಸಾರ್ವಜನಿಕರಿಂದ ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯ ಎಂದು ವಿಚಾರಿಸಿದರು. 1 ತಿಂಗಳಿಂದ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲಾ ಎಂದು ಸಾರ್ವಜನಿಕರು ದೂರು ನೀಡಿದರು, ಡಿಹೆಚ್ಓಗೆ ತಿಳಿಸಿ 10 ದಿನದಲ್ಲಿ ಡಾಕ್ಟರ್ ಹಾಕಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯ್ತಿ ಸಭೆಯಲ್ಲಿ ಅಧ್ಯಕ್ಷ ಸಿ.ಟಿ. ಶಿವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಕೆ. ನಾಗಪ್ಪ, ಪಿಡಿಓ. ಹೇಮಲತ, ಕಾರ್ಯದರ್ಶಿ ಮಲ್ಲೇಶ್, ದಿನೇಶ್, ಸುರೇಶ್, ನಾಗೇಶ್ ಇದ್ದರು.
ಪಠ್ಯ ಪುಸ್ತಕ ನೀಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾಸನ, ಜೂ. 25
ಪಿಯುಸಿ ವಿದ್ಯಾರ್ಥಿಗಳಿಗೆ ತಕ್ಷಣ ಪಠ್ಯ ಪುಸ್ತಕ ನೀಡುವಂತೆ ಒತ್ತಾಯಿಸಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಧರಣಿ ನಡೆಸಿದರು.
ಶೈಕ್ಷಣಿಕ ವರ್ಷ ಈಗಾಗಲೇ ಪ್ರಥಮ ಮತ್ತು ದ್ವೀತಿಯ ವರ್ಷದ ತರಗತಿಗಳು ಪ್ರಾರಂಭವಾಗಿದ್ದರೂ ಇದುವರೆಗೂ ಪಠ್ಯ ಪುಸ್ತಕಗಳು ದೊರಕದೆ ವಿದ್ಯಾರ್ಥಿಗಳು, ಅಧ್ಯಾಪಕರು ಗೊಂದಲ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪುಸ್ತಕ ವಿತರಿಸಲು ಮುಂದಾಗಿ ಈ ಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಸರ್ಕಾರದ ನಿರ್ಲಕ್ಷ: ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಪದವಿ ಪೂರ್ವದಲ್ಲಿ ವ್ಯಾಸಂಗ ಮಾಡಲಾಗುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಒಟ್ಟು 45 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ರಾಜ್ಯದ ಮಾರುಕಟ್ಟೆಗೆ ಲಭ್ಯವಾಗಬೇಕಾಗಿದೆ. ಸರ್ಕಾರದ ನಿರ್ಲಕ್ಷದಿಂದ ಪುಸ್ತಕಗಳು ಬರುವಲ್ಲಿ ವಿಳಂಬವಾಗಿದೆ ಎಂದು ದೂರಿದರು. ತಕ್ಷಣ ಸರ್ಕಾರ ಗಮನ ನೀಡಿ ಪಠ್ಯ ಪುಸ್ತಕ ವಿತರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಲಕ್ಷ್ಮಿಕೇಶವ್, ಅಭಿಷೇಕ್ ಇತರರು ಇದ್ದರು.
ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಹಾಸನ: ನಗರದ ದೇವೇಗೌಡ ನಗರ ಮತ್ತು ಕೃಷ್ಣ ನಗರ ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಿ, ಚರಂಡಿ, ರಸ್ತೆ ನಿರ್ಮಿಸುವಂತೆ ಕರ್ನಾಟಕ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಹೇಮಾವತಿ ಪ್ರತಿಮೆ ಬಳಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಲಾಯಿತು.
ಎರಡು ಬಡಾವಣೆಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಸಿಲ್ಲ. ಸಂಬಂಧ ಪಟ್ಟ ಇಲಾಖೆ ಅಧಿಕಾರಿ ಮತ್ತು ಸಚಿವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವ ಪ್ರಯೋಜನವಾಗಿರುವುದಿಲ್ಲ ಎಂದು ಆರೋಪಿಸಿದರು. ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ವೀರ ಗನ್ನಡಿಗರ ಸೇನೆಯ ರಾಜ್ಯ ಉಪಾಧ್ಯಕ್ಷ ತಾಜೀಂ ಪಾಷ, ನಗರಾಧ್ಯಕ್ಷ ನವೀನ್, ಆಟೋ ಘಟಕದ ಅಧ್ಯಕ್ಷ ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಮೀರ್ ಇತರರು ಇದ್ದರು.
ಆರೋಗ್ಯ ಕಡೆಗಣಿಸಬೇಡಿ: ಡಾ. ದಿನೇಶ್
ಅರಸೀಕೆರೆ: ಪ್ರತಿಯೊಬ್ಬ ಮನುಷ್ಯನೂ ತಮ್ಮ ಆರೋಗ್ಯದ ಬಗ್ಗೆ ಉದಾಸೀನತೆಯ ಮನೋಭಾವನೆ ಬಿಟ್ಟು ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಉಂಟಾದಲ್ಲಿ ತಕ್ಷಣ ಸ್ಥಳೀಯ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗದೆ ಹೋದಲ್ಲಿ ಆತ ಮುಂದೆ ತನ್ನ ಬದುಕಿನಲ್ಲಿ ಬಾರಿ ಪ್ರಮಾಣದ ಬೆಲೆಯನ್ನು ತೆರಬೇಕಾಗುತ್ತದೆ ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ. ದಿನೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ, ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಅನಾಫಿಲೀಸ್ ಎಂಬ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳು ಮನುಷ್ಯನನ್ನು ಕಚ್ಚುವುದರಿಂದ ಈ ರೋಗವು ಸಾಂಕ್ರಾಮಿಕ ರೋಗವಾಗಿ ಹರಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಕ ಶಿವಣ್ಣ, ಕ್ಷೇತ್ರ ಆರೋಗ್ಯಧೀಕಾರಿ ಬಿ.ಎಚ್.ಈಶ್ವರಪ್ಪ, ಸಾಹಿತಿ ಇಂದಿರಾ ರೇಣುಕನಾಥ್ ಮತ್ತಿತರು ಇದ್ದರು.
ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಹಿರಿದು
ಅರಸೀಕೆರೆ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಮಾಧ್ಯಮಗಳ ಉತ್ತಮ ಸಹಕಾರ ಕೂಡ ಅತ್ಯಂತ ಅಗತ್ಯವಿದೆ ಎಂದು ಡಿವೈಎಸ್ಪಿ ಐ.ಜಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಸಂಯುಕ್ತವಾಗಿ ಡಿವೈಎಸ್ಪಿ ಮಂಜುನಾಥ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಸಿಬ್ಬಂದಿ ಅಪರಾದ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಮತ್ತು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡುವಲ್ಲಿ ಹಗಲು ರಾತ್ರಿಯನ್ನು ಲೆಕ್ಕಿಸದೆ ಶ್ರಮಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನೂತನ ಡಿವೈಎಸ್ಪಿ, ಸುಜೀತ್ ಮಾತನಾಡಿ, ಸಾರ್ವಜನಿಕ ರಂಗದಲ್ಲಿ ಕರ್ತವ್ಯ ಮಾಡುವ ಅಧಿಕಾರಿಗಳಿಗೆ ಸಾರ್ವಜನಿಕರು ನೀಡುವ ಪ್ರೀತಿ ವಿಶ್ವಾಸ ನಮ್ಮ ಉತ್ತಮ ಕಾರ್ಯಕ್ಕೆ ಪ್ರೇರಕವಾದ ಶಕ್ತಿ ನೀಡುತ್ತದೆ ಎಂದರು.
ಮಾದಿಗ ದಂಡೋರ ಸಮಿತಿ ರಾಜ್ಯ ಕಾರ್ಯದಶಿಂ ಇಂದ್ರೇಶ್, ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ತಹಸೀಲ್ದಾರ್ ಪಿ.ಜಿ.ನಟರಾಜ್ ಮಾತನಾಡಿದರು. ಗ್ರಾಮಾಂತರ ವೃತ್ತ ನಿರೀಕ್ಷಕ ಗಂಗಾಧರಪ್ಪ, ನಗರ ಆರಕ್ಷಕ ನಿರೀಕ್ಷಕ ನಂದಕುಮಾರ್, ಪೊಲೀಸ್ ಸಿಬ್ಬಂದಿ ಗಂಗಾಧರ ನಾಯ್ಕ್, ಮೋಹಿತ್, ನಾಗರಾಜ್, ಗೋಪಾಲ್, ಸಿದ್ದೇಶ್, ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್, ಅಬ್ದುಲ್ ಜಮೀಲ್ ಇನ್ನಿತರರು ಇದ್ದರು.