ಪುರಸಭೆಯ ಬೆಂಬಿಡದ ತ್ಯಾಜ್ಯ ಭೂತ
ಕನ್ನಡಪ್ರಭ ವಾರ್ತೆ, ಸಕಲೇಶಪುರ, ಜೂ. 25
ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವಂತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದರೂ, ಪುರಸಭೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಧಿಕಾರಿಗಳೂ ಸಹ ತೀರ್ಪಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಪಟ್ಟಣದ ಕಸವನ್ನು ಕೆರೆ, ತಗ್ಗುಪ್ರದೇಶಗಳಿಗೆ ಹಾಕಿದ ನಂತರ ಮತ್ತೆಲ್ಲಿ ಹಾಕುವುದು ಎಂಬ ಪ್ರಶ್ನೆ ಉದ್ಬವಿಸಿದ ಸಂದರ್ಭದಲ್ಲಿ ಒಂದೆಡೆ ಹೇಮಾವತಿ ನದಿಗೆ ಮತ್ತೊಂದೆಡೆ ಆಜಾದ್ ರಸ್ತೆಯ ಜನನಿಬಿಡ ಪ್ರದೇಶ ಇರುವ ಸ್ಮಶಾನ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಪ್ರಾರಂಭಿಸಿತ್ತು.
ತ್ಯಾಜ್ಯ ಸುರಿಯಲು ವಿರೋಧ: ಪುರಸಭೆಯ ಈ ಕಾರ್ಯಕ್ಕೆ ಸ್ಥಳೀಯ ಅಜಾದ್ ರಸ್ತೆ ನಿವಾಸಿಗಳು 2008-09 ರಲ್ಲಿ ಪ್ರಬಲವಾಗಿ ವಿರೋಧಿಸಿದರು. ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಕಸ ವಿಲೇವರಿ ಮಾಡಿದ ಪರಿಣಾಮವಾಗಿ ಆಜಾದ್ ರಸ್ತೆಯ ನಿವಾಸಿಗಳು ಸೊಳ್ಳೆ, ಬೀದಿ ನಾಯಿ, ರಣಹದ್ದು ಹಾಗೂ ಕಾಗೆಗಳ ಕಾಟದಿಂದದಿಂದ ಬೇಸತ್ತಿದ್ದರು.
2010 ರ ಡಿಸೆಂಬರ್ನಲ್ಲಿ ನ್ಯಾಯಲಯ ಪುರಸಭೆ ತ್ಯಾಜ್ಯವನ್ನು ಇನ್ನೂ ಮೂರು ತಿಂಗಳ ಅವಧಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ತಿರ್ಪುನೀಡಿತ್ತು. ಆದರೆ ತೀಪು ನೀಡಿ 4 ವರ್ಷ ಕಳೆದರು ಇಂದಿಗೂ ಈ ಜನವಸತಿ ಪ್ರದೇಶದಲ್ಲೆ ತ್ಯಾಜ್ಯ ಹಾಕಲಾಗುತ್ತಿದ್ದು. ನ್ಯಾಯಲಯದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಕಸ ಸಂಸ್ಕರಣೆ: ಪಟ್ಟಣದ 23 ವಾರ್ಡ್ಗಳಿಂದ ಉತ್ಪತ್ತಿಯಾಗುವ ಸುಮಾರು 9 ರಿಂದ 10 ಟನ್ ಕಸವನ್ನು ಪಟ್ಟಣದ ಅಜಾದ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಹಾಕಲಾಗುತ್ತಿತು.್ತ ಇಲ್ಲಿ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆದಿದದರಿಂದಾಗಿ 9 ವಾರ್ಡ್ಗಳ ಕಸವನ್ನು ಚಾಮುಂಡೇಶ್ವರಿ ಹಾಗೂ ಅನೂಷ್ಟನ ಗುಂಪಿನ ನೆರವಿನಿಂದ ಮನೆಮನೆಯಿಂದ ಕಸ ಸಂಗ್ರಹಿಸಿ ಶೂನ್ಯ ತ್ಯಾಜ್ಯಘಟಕದಲ್ಲಿ ಕಸ ಸಂಸ್ಕರಿಸುವ ಕೆಲಸವನ್ನು 2011 ರಲ್ಲಿ ಆರಂಭಿಸಲಾಯಿತು.
ಆದರೆ ಇನ್ನುಳಿದ 14 ವಾರ್ಡ್ನ ಕಸವನ್ನು ಅಜಾದ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಹಾಕುವ ಮೂಲಕ ಜನರ ಬದುಕನ್ನು ನರಕಮಾಡಿದೆ. ಹೇಮಾವತಿಯ ನದಿಯ ದಂಡೆಯಲ್ಲಿ ಸಂಗ್ರಹವಾಗಿರುವ ಬಾರಿ ಕಸದ ರಾಶಿಗೆ ಮಳೆ ನೀರು ಸಂಗ್ರಹವಾಗಿ ಕಸದ ತ್ಯಾಜ್ಯ ನದಿಗೆ ಸೇರುತ್ತಿದ್ದು ಈ ನದಿಯ ನೀರನ್ನು ಕುಡಿಯುವ ಜನರಿಗೆ ಅನಾರೋಗ್ಯಕ್ಕೆ ಬಳಗಾಗುವ ಭಯ ಆವರಿಸಿದೆ.
49 ಮಂದಿ ಸಿಬ್ಬಂದಿ: ಸ್ವಚ್ಛತೆಗಾಗಿ ಪುರಸಭೆ ಪ್ರತಿ ತಿಂಗಳು 4.30 ಲಕ್ಷ ರು. ಖರ್ಚು ಮಾಡುತಿದ್ದು, ಇದಕ್ಕಾಗಿ ಪುರಸಭೆ 19 ಕಾಯಂ ಸಿಬ್ಬಂದಿ ಹಾಗೂ 23 ದಿನಗೂಲಿಗಳು ಸೇರಿದಂತೆ 49 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ಚಾಮುಡೇಶ್ವರಿ ನಿರಂತರ ಉಳಿತಾಯ ಗುಂಪು 5 ವಾರ್ಡ್ನಲ್ಲಿ ಹಾಗೂ ಅನುಷ್ಠಾನ ಸಂಘ 4 ವಾರ್ಡ್ಗಳಲ್ಲಿ ಮನೆಮನೆ ಕಸ ಸಂಗ್ರಹಿಸುತ್ತಿದೆ. ಒಟ್ಟು ಪಟ್ಟಣದಲ್ಲಿ ದಿನಂ ಪ್ರತಿ 9 ರಿಂದ 10 ಟನ್ ಉತ್ಪಾದನೆಯಾಗುತ್ತಿದ್ದು ಇದರಲ್ಲಿ 2 ಟನ್ ಕಸವನ್ನು ಶೂನ್ಯ ಘನತ್ಯಾಜ್ಯ ಘಟಕದಲ್ಲಿ ಸಂಸ್ಕರಿಸಿ ಗೊಬ್ಬರ ಮಾಡಲಾಗುತ್ತಿದ್ದರೆ ಉಳಿದ ಕಸವನ್ನು ಅವೈಜ್ಞಾನಿಕವಾಗಿ ವಿಲೇವರಿ ಮಾಡಲಾಗುತ್ತಿದೆ.
ಕನಸಾದ ಪ್ಲಾಸ್ಟಿಕ್ ಮುಕ್ತ ಪಟ್ಟಣ
2011 ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ಡಿ ಆದರ್ಶ ಅವರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳಿಗೆ ನಿಷೇಧ ಹೇರಿದ ಪರಿಣಾಮ ಜನರು ಕ್ಯಾರಿ ಬ್ಯಾಗ್ಗಳ ಬದಲಿಗೆ ಬದಲಿ ಬ್ಯಾಗ್ಗಳನ್ನು ಬಳಸಲು ಪ್ರಾರಂಭಿಸಿದ್ದರು. ನಿತ್ಯ ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಬ್ಯಾಗ್ ಮಾರಾಟಗಾರರ ಅಂಗಡಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದ್ದರು. ಮಾರಾಟ ಮಾಡುವುದು ಹಾಗೂ ಬಳಸುವುದು ಪಟ್ಟಣದಲ್ಲಿ ಸಂಪೂರ್ಣ ನಿಷೇಧವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪುರಸಭೆ ಅಧಿಕಾರಿಗಳು ಮೃದುಧೋರಣೆ ತಳೆದ ಪರಿಣಾಮ ಇಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳ ಬಳಕೆ ಹಾಗೂ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಪಟ್ಟಣದ ಚರಂಡಿ, ರಸ್ತೆಗಳಲ್ಲೆಲ್ಲ ಪ್ಲಾಸ್ಟಿಕ್ಮಯವಾಗಿವೆ.
ಸ್ವಚ್ಛಗೊಳ್ಳದ ರಸ್ತೆ, ಚರಂಡಿ: ಪಟ್ಟಣದಲ್ಲಿ ಪ್ರತಿದಿನ ಸ್ವಚ್ಛತೆ ನಡೆಸಲಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಸಮಾಜಾಯಿಷಿ ನೀಡುತ್ತಿದ್ದರೂ ಪಟ್ಟಣದ ಬಹುತೇಕ ಬಡಾವಣೆಯಲ್ಲಿ ಕಸದ ತೊಟ್ಟಿಗಳು ತುಂಬಿ ರಸ್ತೆಗೆ ಚೆಲ್ಲುತ್ತಿದ್ದರು ತೆಗೆಯಲು ತೆಗೆಯಲು ಸಿಬ್ಬಂದಿಗಳು ಬರುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.
ಕಾಮಗಾರಿ ನನೆಗುದಿಗೆ
ಪಟ್ಟಣ ಸಮೀಪದ ಮಳಲಿಯಲ್ಲಿ ಕಸವಿಲೇವರಿ ಘಟಕ ತೆರೆಯುವ ನಿಟ್ಟಿನಲ್ಲಿ 8 ಎಕರೆ ಜಾಗವನ್ನು ವಶಪಡಿಸಿಕೊಂಡ ಪುರಸಭೆ 2007-08 ರಲ್ಲಿ ಕಾಮಗಾರಿ ಸಹ ಆರಂಬಿಸಿತು.್ತ ಆದರೆ ಕಸವಿಲೇವರಿ ಘಟಕ ಸ್ಥಾಪನೆಗೆ ಬಾರಿ ವಿರೋಧವನ್ನು ಸ್ಥಳಿಯರಿಂದ ಎದುರಿಸಿದ ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಆದರೆ, 2010 ರಲ್ಲಿ ನ್ಯಾಯಲಯ ತಕ್ಷಣವೆ ವೈಜ್ಞಾನಿಕವಾಗಿ ಕಸವಿಲೇವರಿ ಮಾಡುವಂತೆ ತೀರ್ಪು ಬಂದ ಹಿನ್ನೆಲೇಯಲ್ಲಿ ಜಾಗೃತವಾದ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಿಂದ ಕಾಮಗಾರಿಗೆ ಮತ್ತೆ ವೇಗ ನೀಡಲಾಯಿತು. 2011-12 ನೇ ಸಾಲಿನಲ್ಲಿ ರಾಜ್ಯ ಹಣಕಾಸು ನಿಧಿ,13 ನೇ ಹಣಕಾಸು ನೆರವಿನಿಂದ ಕಾಮಗಾರಿಯನ್ನು ನಡೆಸಲಾಗಿದೆ. ಇದುವರೆಗೆ ಸುಮಾರು 1.5 ಕೋಟಿ ರು. ವೆಚ್ಚ ತಗುಲಿದ್ದು ಶೇ 70 ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದರೂ ಕಸ ಸಂಸ್ಕರಣೆ ಯಂತ್ರಗಳು ಬಾರದ ಹಿನ್ನೆಲೇಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕಸದ ಸಮಸ್ಯೆ ಪುರಸಭೆಯನ್ನು ಬೆಂಬಿಡದ ಭೂತವಾಗಿ ಕಾಡುತ್ತಿದೆ.
ಅಜಾದ್ ರಸ್ತೆಯಲ್ಲಿ ತಂದು ಸುರಿಯುತ್ತಿರುವ ಕಸದ ರಾಶಿಯಿಂದಾಗಿ ನೆಮ್ಮದಿಯ ಬದುಕು ಮಾಯವಾಗಿದ್ದು ದಿನನಿತ್ಯ ಕಿರಿಕಿರಿ ಅನುಭವಸುತ್ತಿದ್ದೇವೆ.
- ಅಬ್ದುಲ್ ಗಫಾರ್,
ಟ್ರ್ಯಾಕ್ಟರ್ ಮೆಕ್ಯಾನಿಕ್.
ಕಸದ ರಾಶಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯ ತೀರ್ಪು ನೀಡಿ ವರ್ಷಗಳೇ ಕಳೆದರೂ ಕಸ ಸಾಗಿಸಲು ಪುರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
- ಕಾಂತರಾಜ್. ಬಡಗಿ
-ಎಸ್.ಎಂ ಮಂಜುನಾಥ್