ರೈತರ ದಿಕ್ಕು ತಪ್ಪಿಸುತ್ತಿರುವ ಕೃಷಿ ನೀತಿ
ಬೇಲೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಕೃಷಿಕರನ್ನು ಭಯೋತ್ಪಾದಕರಂತೆ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೇಂದ್ರ ಹಾಗು ರಾಜ್ಯದ ಕೃಷಿ ನೀತಿಗಳಿಂದ ರೈತಾಪಿ ವರ್ಗ ದಿಕ್ಕು ತಪ್ಪಿದಂತಾಗಿದೆ ಎಂದು ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರಜೋಷಿ ಆತಂಕ ವ್ಯಕ್ತಪಡಿಸಿದರು
ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಕಾಫಿ ಬೆಳೆಗಾರರ ಸಮಾವೇಶ ಹಾಗು ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಸಂಘಟಿತರಾದಾಗ ಮಾತ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ತಡೆಯಲು ಸಾಧ್ಯ. ಸಂಘ ಸಂಸ್ಥೆಗಳನ್ನು ಕಟ್ಟಿದರೆ ಸಾಲದು, ಅದು ಯಾವ ದಿಕ್ಕಿನಲ್ಲಿ ತನ್ನ ಕರ್ತವ್ಯ, ಮತ್ತು ಜವಬ್ಧಾರಿಯನ್ನು ನಿರ್ವಹಿಸ ಬೇಕು ಎಂಬ ಚಿಂತನೆಯನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಕೇವಲ ಸಮಾವೇಶಗಳನ್ನು ಮಾಡಿದರೆ ಸಾಲದು, ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೂ ಅವರ ಪರ ನಿಲ್ಲಬೇಕು ಎಂದು ಕರೆ ನೀಡಿದರು .
ಪ್ರತಿಭಟನೆಯ ಎಚ್ಚರಿಕೆ:
45 ವರ್ಷದ ಹಿಂದೆ ಇನಾಂ ಭೂಮಿ ಕಾಯಿದೆ ಜಾರಿಗೆ ತಂದು ಪಶ್ಚಿಮ ಘಟ್ಟದಲ್ಲಿರುವ ಬಡ ರೈತರಿಗೆ ಆಧಿಕೃತ ದಾಖಲಾತಿ ಕೊಟ್ಟು ಪ್ರಮಾಣ ಪತ್ರ ನೀಡಿ ಭೂಮಿ ಕೊಟ್ಟಿದ್ದರು. ಆದರೆ ಈಗ ಅಭಯಾರಣ್ಯದ ನೆಪವೊಡ್ಡಿ ರೈತರನ್ನು ತೆರವು ಗೊಳಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಕೃಷಿಕ ಸಮುದಾಯದ ಶೋಷಣೆ ಮುಂದುವರೆದರೆ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಳಿವಿನಂಚಿಗೆ ಕಾಫಿ ಉದ್ಯಮ: ಕಾಫಿ ಬೆಳೆಗಾರರ ಕಾಫಿ ಮಂಡಳಿ ಸದಸ್ಯ ಡಾ. ಪ್ರದೀಪ್ ಮಾತನಾಡಿ, 4 ಲಕ್ಷ ಬೆಳೆಗಾರರು, 65 ಲಕ್ಷ ಕಾರ್ಮಿಕರು ಹಾಗು 60 ಮಿಲಿಯನ್ ಗಿಡ ಮರಗಳನ್ನು ಸಂರಕ್ಷಣೆ ಮಾಡುತ್ತಿರುವ ಕಾಫಿ ಬೆಳೆಗಾರರು ಇಂದು ಹತ್ತಾರು ಸಮಸ್ಯೆಗಳಿಂದ ನರಳುತ್ತಿದ್ದಾರೆ.
ಕಾಂಡ ಕೊರಕ ಹುಳುವಿ ಬಾಧೆ, ಒತ್ತುವರಿ ಭೂಮಿ ತೆರವು, ಇನಾಂ ಭೂಮಿ, ಬೆಲೆಯ ಏರುಪೇರು, ಸರ್ಕಾರದ ವಿರೋಧಿ ನೀತಿಯಿಂದಾಗಿ ಕಾಫಿ ಉದ್ದಿಮೆ ಅಳಿವಿನ ಅಂಚಿಗೆ ಜಾರುತ್ತಿದೆ ಎಂದು ವಿಷಾದಿಸಿದರು.
ಕಾಫಿ ಉದ್ದಿಮೆಯನ್ನು ದಕ್ಷಿಣ ಭಾರತದ ಶ್ವಾಸಕೋಶ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಈಗ ಅದೇ ಉದ್ದಿಮೆ ಸರ್ಕಾರದ ಮಲತಾಯಿ ಧೋರಣೆಯಿಂದ ಕಂಗಾಲಾಗಿದೆ. ಭೂ ಒತ್ತುವರಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದು ದೇಶದ ಜನತೆಯ ನ್ಯಾಯ ಕಾಪಾಡುವ ಕಾನೂನು ಕೂಡ ರೈತ ವಿರೋಧಿಯಾಗಿದೆ ಎಂದರು.
ತಾಲೂಕು ಕಾಫಿ ಬೇಳೆಗಾರರ ಸಂಘದ ಅಧ್ಯಕ್ಷ ತೊ. ಚ ಅನಂತಸುಬ್ಬರಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಸಂಘದ ಕೆ ಆರ್.ರಾಜಶೇಖರ್, ಬೆಳೆಗಾರರ ಒಕ್ಕೂಟದ ಬಿ ಎಸ್.ಜಯರಾಂ, ಎನ್. ನಾಗರಾಜ್, ಎಂ.ಆರ್.ಮಂಜುನಾಥ್, ಎಸ್ ಎಂ ದಿನೇಶ್, ಜಿ. ಬಿ ಶ್ರೀನಿವಾಸ್, ಇ.ಡಿ ರಾಜಶೇಖರ್,ಬಿ. ಡಿ ಮಲ್ಲಿಕಾರ್ಜುನ್, ಇತರರು ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಫಿ ಬೆಳೆಗಾರರ ಹಾಗು ಕಾರ್ಮಿಕರ ಮಕ್ಕಳನ್ನು ಹಾಗು ಐಎಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಶ್ರೇಯಸ್ ಅವರನ್ನು ಸನ್ಮಾನಿಸಲಾಯಿತು.