ತಂಬಾಕು ಸೇವನೆ: ಪ್ರತಿ ವರ್ಷ 10 ಲಕ್ಷ ಮಂದಿ ಸಾವು
ಹಾಸನ: ಕೇವಲ ತಂಬಾಕಿನ ಸೇವನೆಯಿಂದಲೇ ಪ್ರತಿವರ್ಷ ದೇಶದಲ್ಲಿ 10 ಲಕ್ಷ ಜನ ಸಾವಿಗೀಡಾಗುತ್ತಿದ್ದು, ಭಾರತದಲ್ಲಿ ಪ್ರತಿ ದಿನ 2,500 ಮಂದಿ ಅಸುನೀಗುತ್ತಿದ್ದಾರೆ ಎಂದು ರಾಜ್ಯ ತಂಬಾಕು ನಿಷೇಧ ಕೋಶ ಮೈಸೂರು ವಿಭಾಗೀಯ ಸಮನ್ವಯಾಧಿಕಾರಿ ಡಾ.ಎಲ್.ಎಸ್. ಚಂದ್ರಕಿರಣ್ ಹೇಳಿದರು.
ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆ, ಶ್ರೀ ಬುವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷೇತ್ರ ಪ್ರಚಾರ ಇಲಾಖೆಗಳ ಆಶ್ರಯದಲ್ಲಿ ನಗರದ ಬೂವನಹಳ್ಳಿ ಶ್ರೀ ಭೂವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳ ಅಭ್ಯಾಸ ಮೃತ್ಯುವಿಗೆ ಆಹ್ವಾನ ನೀಡಿದಂತೆ, ಇದು ಕೇವಲ ಶಾರೀರಿಕವಾಗಿ ಮನುಷ್ಯನನ್ನು ದುರ್ಬಲವನ್ನಾಗಿಸದೆ ಮಾನಸಿಕ, ಸಾಮಾಜಿಕ, ಆರ್ಥಿಕವಾಗಿ ಜೀವನ ಹಾಳು ಮಾಡುತ್ತದೆ ಎಂದರು.
ಸ್ಥಗಿತಕ್ಕೆ ಚಿಂತನೆ: 2020ರ ವೇಳೆಗೆ ತಂಬಾಕು ಉತ್ಪನ್ನ ಬೆಳೆಯುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಭಾರತ ಚಿಂತನೆ ನಡೆಸಿದೆ. ಆದರೆ ತಂಬಾಕಿನಿಂದ ದೂರ ಉಳಿಯಲು ಅಲ್ಲಿಯವರೆಗೂ ಕಾಯುವ ಅಗತ್ಯ ಇಲ್ಲ, ಆರೋಗ್ಯದ ಮೇಲೆ ಹಾನಿ ಮಾಡುವ ಯಾವುದೇ ವಸ್ತು ಅಥವಾ ದ್ರವ ಮತ್ತು ಅನಿಲ ಪದಾರ್ಥವನ್ನು ಸೇವಿಸುವುದು ಅರ್ಥವೇ ಇಲ್ಲ ಎಂದರು.
ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಎನ್. ರಾಜಗೋಪಾಲ್ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದ ದೇಹದ ಅಂಗಾಂಗಗಳೆಲ್ಲಾ ವಿಫಲವಾಗುತ್ತದೆ. ಇದರಿಂದ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಬಹುಬೇಗ ಸಾವಿನ ಕಡೆ ಸಾಗಬೇಕಾಗುತ್ತದೆ ಎಂದರು. ಮನ ಪರಿವರ್ತನೆ ಮೂಲಕ ಅಥವಾ ದೃಢಸಂಕಲ್ಪದಿಂದ ಇಂತಹ ದುಶ್ಚಟಗಳಿಂದ ಹೊರಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜವೂ ಇಂತಹವರ ಮೇಲೆ ಪ್ರಭಾವ ಬೀರಿ ಪರಿವರ್ತೆಗೆ ಸಹಕರಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಬೀರ್ ಅಹಮದ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಬೂವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದ ಆಪ್ತ ಸಮಾಲೋಚಕ ಎಂ. ಮಂಜುನಾಥ್, ಬ್ರಹ್ಮ ಕುಮಾರಿ ಈಶ್ವರೀಯ ಮಹಾ ವಿದ್ಯಾಲಯದ ರೇಶ್ಮಾ ಮಾತನಾಡಿದರು. ಶ್ರೀ ಬೂವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದ ಯೋಜನಾ ನಿರ್ದೇಶಕಿ ರಂಜನಿ ಗೋವಿಂದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ, ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಪ್ರಕಾಶ್ ಇದ್ದರು. ಈ ಸಂದರ್ಭದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಿಂಬಿಸುವ ಚಲನಚಿತ್ರ ಪ್ರದರ್ಶಿಸಲಾಯಿತು.