ಹಾಸ್ಟೆಲ್ಗೆ ತಾಪಂ ಅಧ್ಯಕ್ಷ: ಸಮಸ್ಯೆಗಳ ವಿರಾಟ ದರ್ಶನ
ಬೇಲೂರು: ಇಲ್ಲಿನ ಸಮಾಜಕಲ್ಯಾಣ ಇಲಾಖೆಗೆ ಒಳಪಡುವ ಪರಿಶಿಷ್ಟಜಾತಿ ವರ್ಗಗಳ ಬಾಲಕರ ಹಾಸ್ಟೆಲ್ಗೆ ತಾ.ಪಂ.ಅಧ್ಯಕ್ಷ ಪರ್ವತಯ್ಯ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಮಸ್ಯೆಗಳ ವಿರಾಟ ದರ್ಶನವಾಯಿತು.
5ನೇ ತರಗತಿಯಿಂದ 10ನೇ ತರಗತಿಯವರೆಗಿನ 80 ವಿದ್ಯಾರ್ಥಿಗಳು ಇಲ್ಲಿದ್ದು, ಹಾಸ್ಟೆಲ್ಲಿನ ಸಮಸ್ಯೆ ಕುರಿತು ಅಧ್ಯಕ್ಷರಲ್ಲಿ ವಿದ್ಯಾರ್ಥಿಗಳು ನಿವೇದಿಸಿಕೊಂಡರು. ಹಾಸ್ಟೆಲ್ಗೆ ಬಣ್ಣ ಹೊಡೆದಿಲ್ಲ. ಕೆಲವು ಕಡೆ ಸೋರುತ್ತದೆ. ಶೌಚಾಲಯದ ಬೇಸಿನ್ ಕೊರಿದು ಹೋಗಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಸೋಲಾರ್ ಲೈಟು ಎರಡು ಮಾತ್ರವಿದೆ. ಸೊಳ್ಳೆ ಕಾಟ ಹೆಚ್ಚಾಗಿದ್ದು, ಸೊಳ್ಳೆಪರದೆ ಕೊಡಬೇಕೆಂದು ಮನವಿ ಮಾಡಿದರು.
ಗಂಟೆಗೆ ಒಂದು ಸಾರಿ ಕರೆಂಟ್ ಹೋಗುತ್ತಿರುವುದರಿಂದ ಯುಪಿಎಸ್ ಅಳವಡಿಸಬೇಕು. ಸಮವಸ್ತ್ರ ಇನ್ನಿತರ ವಸ್ತುಗಳ ಶೀಘ್ರ ಕೊಡಿಸುವಂತೆ ಕೋರಿದರು. ವಾರ್ಡ್ನ ಶಿವಣ್ಣ ಅವರೊಂದಿಗೆ ಅಧ್ಯಕ್ಷ ಪರ್ವತಯ್ಯ ಚರ್ಚಿಸಿದರು. ವಿದ್ಯಾರ್ಥಿಗಳ ತಲೆಕೂದಲು ಕತ್ತರಿಸದಿರುವ ಬಗ್ಗೆ ಪ್ರಶ್ನಿಸಿದರು. ಸೌಲಭ್ಯಗಳ ನೀಡುವಂತೆ ಸೂಚಿಸಿದರು. ಕಟ್ಟಡಕ್ಕೆ ಬಣ್ಣ ಹೊಡಿಸಲು, ಶೌಚಾಲಯ ದುರಸ್ತಿ, ಯುಪಿಎಸ್ ಅಳವಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಇದೆ ವೇಳೆ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ವಿತರಿಸಿದರು. ಅಡುಗೆ ಮನೆ ವೀಕ್ಷಿಸಿದ ಬಳಿಕ ರುಚಿ ಹಾಗೂ ಶುಚಿಯಾಗಿ ಅಡುಗೆ ಮಾಡುವಂತೆ ಅಡುಗೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿ, ಪೋಷಕರು ಹೊರತುಪಡಿಸಿ ಇತರೆಯವರಿಗೆ ಹಾಸ್ಟೆಲ್ ಒಳಗೆ ಸೇರಿಸದಂತೆ ಸೂಚಿಸಿದರು.
ಕಟ್ಟಡಕ್ಕೆ ಬಣ್ಣ ಹೊಡಿಸಬೇಕಿದೆ. ಶೌಚಾಲಯ ಕೆಲವು ಭಾಗದಲ್ಲಿ ರಿಪೇರಿಯಾಗಿದ್ದು ಇನ್ನೂ ಕೆಲವನ್ನ ಮಾಡಿಸಬೇಕಿದೆ. ಶೀಘ್ರ ಯುಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಮಸ್ಯೆಯಿಂದ ಕೆಲವು ಸಂದರ್ಭ ನೀರಿನ ತೊಂದರೆಯಾಗುತ್ತಿದೆ. ಸೊಳ್ಳೆಪರದೆ ಬಂದ ತಕ್ಷಣ ವಿತರಿಸಲಾಗುವುದು.