ಹೆಗ್ಗಣಗಳಿರುವ ಶವಾಗಾರಕ್ಕೆ ಸಚಿವರ ಭೇಟಿ
ಹಾಸನ: ಜಿಲ್ಲೆಯಲ್ಲಿ ರಾಜೀವ್ ಆಸ್ಪತ್ರೆಯಲ್ಲಿ ಮಗು ಸಾವು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಮಗು ಮೃತದೇಹವನ್ನು ಹೆಗ್ಗಣಗಳು ಕಚ್ಚಿ ತಿಂದದ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿದ್ದು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ತನಿಖೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ರಾಜೀವ್ ಆಸ್ಪತ್ರೆಯಲ್ಲಿ ಮಗುವಿನ ಸಾವಿಗೆ ನಿಖರವಾದ ಕಾರಣ, ಮಗುವಿನ ಗಂಭೀರ ಅನಾರೋಗ್ಯವನ್ನು ಮತ್ತು ಆ ಬಗ್ಗೆ ನಿಜವಾಗಿಯೂ ಮೊದಲೇ ತಿಳಿಸಲಾಗಿತ್ತೇ. ಆ ನಂತರ ಮಗುವಿನ ಮೃತದೇಹ ಜಿಲ್ಲಾ ಆಸ್ಪತ್ರೆಗೆ ತಂದ ವೇಳೆ ಶವವನ್ನು ಸುರಕ್ಷಿತವಾಗಿಡದೆ ನಿರ್ಲಕ್ಷಿಸಲು ಕಾರಣವೇನು ಇದರಲ್ಲಿ ಡಿ. ದರ್ಜೆ ನೌಕರರಲ್ಲದೇ ಇತರೆ ಇನ್ಯಾರದಾದರೂ ಲೋಪಗಳಿವೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ಬಗ್ಗೆ ಕ್ರಮ ವಹಿಸಲಾಗುವುದು ಎಂದರು. ಇದೇ ವೇಳೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಶವಾಗಾರ ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದರು. ದೊಡ್ಡ ಆಸ್ಪತ್ರೆಯಲ್ಲಿ ಶವಾಗಾರ ಅಚ್ಚುಕಟ್ಟಾಗಿ ನಿರ್ವಹಣೆಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲು ವೈದ್ಯಕೀಯ ಕಾಲೇಜು ನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಇತರ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ, ಕೆಟ್ಟಿರುವ ಶೈತ್ಯಾಗಾರಗಳನ್ನು ದುರಸ್ಥಿಪಡಿಸಲು ನಿರ್ದೇಶನ ನೀಡಿದರು.