ಇಬ್ಬರ ಮೊಬೈಲ್ ಕಳ್ಳರ ಬಂಧನ
ಅರಸೀಕೆರೆ: ಪಟ್ಟಣದ ಶ್ಯಾನುಬೋಗರ ಬೀದಿಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಅವರಿಂದ 9 ಸಾವಿರ ಬೆಲೆಯ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿಯ ಸುರಭಿ ಟೆಲಿಕಾಂ ಅಂಗಡಿ ಬಳಿ ಬುಧವಾರ ಮಧ್ಯಾಹ್ನ ಕಳವು ಮಾಡಿದ ಮೊಬೈಲ್ಗಳನ್ನು ಮಾರಾಟ ಮಾಡಲು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಪಟ್ಟಣದ ಮುಜಾವರ್ ಮೊಹಲ್ಲಾದ ಆದಿಲ್ (25) ಮತ್ತು ಭದ್ರಾವತಿ ತಾಲೂಕಿನ ಸಿಗೆಬಾಗೆ ಗ್ರಾಮದ ಅಜ್ಗರ್ ಅಲಿ (20) ಎಂಬ ಇಬ್ಬರೂ ಆರೋಪಿಗಳನ್ನು ಪಟ್ಟಣದ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಂದಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ಅಯ್ಯನ್ ಗೌಡ ಬಂಧಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಜಗನ್ನಾಥ್, ಹೀರಾಸಿಂಗ್ ಭಾಗವಹಿಸಿದ್ದರು.
ಅಪರಿಚಿತ ಶವ ಪತ್ತೆ: ನಗರದ ಹೊಸ ಬಸ್ಸು ನಿಲ್ದಾಣದ ಹತ್ತಿರವಇರುವ ನೀರು ಹರಿಯಲು ಮಾಡಿರುವ ದೊಡ್ಡ ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಬಲ ಕಿವಿಯ ಹತ್ತಿರ, ಬಲ ಕೆನ್ನೆ, ಗದ್ದ, ಬಲಕಣ್ಣು, ಎಡ ಹಣೆ ಮತ್ತು ಮೇಲ್ಭಾಗದ ತುಟಿಯಲ್ಲಿ ಗಾಯಗಳಿದ್ದು ಮೃತರ ಹೆಸರು ಗೊತ್ತಿಲ್ಲ, ಸುಮಾರು 35ರಿಂದ 40 ವರ್ಷ ವಯಸ್ಸು, 170 ಸೆಂ.ಮೀ.ಎತ್ತರ, ದೃಢಕಾಯ ಮೈಕಟ್ಟು, ದುಂಡುಮುಖ, ಎಣ್ಣೆಗೆಂಪು ಬಣ್ಣ, ಬಲ ಎದೆಯ ಮೇಲ್ಭಾಗ ಕಪ್ಪು ಮಚ್ಚೆ ಇದೆ. ಕಪ್ಪು ಬಿಳಿ ಮಿಶ್ರೀತ ತಲೆ ಕೂಡಲು ಇದ್ದು ಮೀಸೆ ಬಿಟ್ಟಿದ್ದಾರೆ. ಮಾಸಲು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು-ಕೇಸರಿ-ಬಿಸ್ಕತ್ ಬಣ್ಣದ ಅರ್ದತೋಳಿನ ಟಿ.ಶರ್ಟ್, ಸೊಂಟದಲ್ಲಿ ಕಪ್ಪು ಉಡದಾರ ಮತ್ತು ಬಲಕೈಯಲ್ಲಿ ಕೆಂಪು ದಾರ ಧರಿಸಿದ್ದು ಸ್ಥಳದಲ್ಲಿ ಒಂದು ಜೊತೆ ಚಪ್ಪಲಿ ಬಿದ್ದಿದೆ. ಈ ಬಗ್ಗೆ ವಾರಸುದಾರರಿದ್ದಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರನ್ನು ಸಂಪರ್ಕಿಸುವಂತೆ ಕೋರಿದೆ.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಸೆರೆ
ಹಾಸನ: ಅಡುಗೆ ಅನಿಲವನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ಗೋಡೌನ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ರಂಗೋಲಿಹಳ್ಳದಲ್ಲಿ ಅಕ್ರಮವಾಗಿ ಅಂಜನಾದ್ರಿ ಎಂಟರ್ ಪ್ರೈಸಸ್ನ ಶಿವಕುಮಾರ್ನನ್ನು ಬಂಧಿಸಿದ್ದು, 15 ಸಿಲಿಂಡರ್, ರೀಫಿಲ್ಲಿಂಗ್ ಯಂತ್ರಗಳುನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಠಾಣೆ ಇನ್ಸ್ಪೆಕ್ಟರ್ ಸಂಜೀವೇಗೌಡ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ
ಹೊಳೆನರಸೀಪುರ: ಕ್ಷಯ ರೋಗಕ್ಕೆ ಸುಮಾರು ನೂರು ವರ್ಷಗಳ ಇತಿಹಾಸವಿದ್ದು, ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಹೃದ್ರೋಗ ತಂತ್ರಜ್ಞ ಡಾ.ನಟರಾಜ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷಯ ರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ ಎಂದರು.
ಚಿಕಿತ್ಸೆ ಪಡೆಯಿರಿ: ಎದೆ ನೋವು ಕಾಣಿಸಿಕೊಳ್ಳುವುದು, ರಕ್ತಅಥವಾ ಕಫದ ಕೆಮ್ಮು, ದೌರ್ಬಲ್ಯ ಅಥವಾ ಆಯಾಸ, ತೂಕ ಕಡಿಮೆಯಾಗುವುದು, ಶೀತ, ಜ್ವರ, ರಾತ್ರಿ ಬೆವರುವುದು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಡಾ.ನಟರಾಜ್ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಸಂಯೋಜಕ ಕೃಷ್ಣಮೂರ್ತಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಜಿಲ್ಲಾ ಸಂಯೋಜಕರು, ಪ್ರಯೋಗಾಲಯದ ಹಿರಿಯ ತಂತ್ರಜ್ಞ ರಾಮಚಂದ್ರ ಇದ್ದರು. ಸಮಾರಂಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕ ಜೆ.ಟಿ.ಸ್ವಾಮಿ ಎಲ್ಲಾ ಕ್ಷಯರೋಗಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ತಜ್ಞ ವೈದ್ಯರಿಂದ ಸಲಹೆ ನೀಡಿಸಿದರು.
ಅಂತರ್ಜಲ ವೃದ್ಧಿಸಲು ಕ್ರಮ: ಶಿವರಾಜ ಎಸ್. ತಂಗಡಗಿ
ಹಾಸನ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದ್ದಾರೆ. ಕುಸಿದಿರುವ ಅಂತರ್ಜಲ ಮಟ್ಟ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.
2009-10 ರಿಂದ 2013-14ರ ವರೆಗೆ (5ವರ್ಷ) ಇಲಾಖೆಯಿಂದ ಹಮ್ಮಿಕೊಳ್ಳಲಾದ ಅಂತರ್ಜಲ ಕೃತಕ ಮರು ಪೂರೈಕೆ ರಚನೆಗಳಲ್ಲಿ ಒಟ್ಟು 22.69 ಲಕ್ಷ ರು. ವೆಚ್ಚದಲ್ಲಿ 15 ಚೆಕ್ ಡ್ಯಾಂ ರಚನೆ ಮಾಡಲಾಗಿದ್ದು, ಅಂತರ್ಜಲ ಮಿತಬಳಿಕೆ ಸಂರಕ್ಷಣೆ ಮತ್ತು ಸದ್ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಲಾಖೆಯಿಂದ ಕಳೆದ 2009-10 ರಿಂದ 2013-14 ರವರೆಗೆ 7 ಜನಜಾಗೃತಿ ಶಿಬಿರಗಳನ್ನು ಶಾಲಾ ಕಾಲೇಜುಗಳಲ್ಲಿ 2.55 ಲಕ್ಷ ರು. ಅನುದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯಲ್ಲಿ ಅಂತರ್ಜಲ ಅಭಿವೃದ್ಧಿಪಡಿಸಲು ಪ್ರತ್ಯೇಕವಾದ ಕಾರ್ಯಕ್ರಮವಿರುವುದಿಲ್ಲ.
ಜಿಲ್ಲೆಯ ಅರಸೀಕೆರೆ, ಬೇಲೂರು ಮತ್ತು ಹಾಸನ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬುವ ಯಾವುದೇ ಪ್ರಸ್ತಾವನೆ ಸಣ್ಣ ನೀರಾವರಿ ಇಲಾಖೆಯಲ್ಲಿ ಇರುವುದಿಲ್ಲ ಉಳಿದಂತೆ ನಿಗಮದ ವ್ಯಾಪ್ತಿಯ ಯೋಜನೆಗಳ ಅಚ್ಚುಕಟ್ಟಿಗೆ ನೀರು ಹರಿಸಿದಾಗ ಅಚ್ಚುಕಟ್ಟಿನಲ್ಲಿ ಬರುವ ಹಾಸನ ಜಿಲ್ಲೆಯ ಕೆರೆಗಳಿಗೂ ನೀರನ್ನು ಹರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಉಂಡಿಗನಾಳಲ್ಲಿ ಕುಡಿಯುವ ನೀರಿಗೆ ತತ್ವಾರ
ಜಾವಗಲ್: ಹೋಬಳಿಯ ಉಂಡಿಗನಾಳು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಜನಸಾಮಾನ್ಯರು ಪ್ರತಿನಿತ್ಯ ನೀರಿಗಾಗಿ ಅಲೆದಾಡುವಂತಾಗಿದೆ. ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವಾಗಿದ್ದು ಸುಮಾರು 800 ಕ್ಕೂ ಹೆಚ್ಚು ಮನೆಗಳಿವೆ. ನೀರಿನ ವ್ಯವಸ್ಥೆಗಾಗಿ ಕೇವಲ 5 ಕೊಳವೆಬಾವಿಗಳಿದ್ದು ಅಂತರ್ಜಲ ಕುಸಿತದಿಂದಾಗಿ ಕೊಳವೆಬಾವಿಗಳೆಲ್ಲ ಬತ್ತಿ ಹೋಗಿ , ಕೆರೆ ಕಟ್ಟೆಗಳಲ್ಲೂ ನೀರಿಲ್ಲದೆ ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ.
ಕೊಳವೆ ಬಾವಿಯಲ್ಲಿ ನೀರಿಲ್ಲ: 800-900 ಅಡಿ ವರೆಗೆ ಕೊಳವೆಬಾವಿ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲದಿರುವುದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಎಂದು ಮಾಜಿ ಮಂಡಲ ಪ್ರಧಾನ ಮಲ್ಲೇಶಪ್ಪ ತಿಳಿಸಿದರು. ಗ್ರಾಮ ಪಂಚಾಯ್ತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ, 3 ದಿನಕ್ಕೊಮೆ ನೀರು ಸರಬರಾಜು ಮಾಡುವುದರಿಂದ ಪ್ರತಿ ವನೆಗೆ 5-6 ಕೊಡ ನೀರು ಸಿಗುತ್ತದೆ ಎಂದು ಗ್ರಾಮಸ್ಥರು ನೊಂದು ನುಡಿದರು.
ಗುಳೆ ಹೋಗುವ ಪರಿಸ್ಥಿತಿ: ಸತತ ರಗಾಲದಿಂದ ಜನರು ತತ್ತರಿಸುತ್ತಿದ್ದು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಬದುಕಿಗಾಗಿ ಗುಳೆ ಹೋಗುವ ಪರಿಸ್ಥಿ ಉಂಟಾಗಿದೆ ಎನ್ನುತ್ತಾರೆ. ಚುನಾಯಿತ ಪ್ರತಿನಿಧಿಗಳು, ತಾಲೂಕು ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಗಮನ ಹರಿಸಿ ಕುಡಿಯುವ ನೀರಿಗೆ ಅದ್ಯತೆ ನೀಡಿ ಪ್ರತಿನಿತ್ಯ ಟ್ಯಾಂಕರ್ನಿಂದ ನೀರು ಸರಬರಾಜು ಮಾಡುವಂತೆ ಜನತೆ ಒತ್ತಾಯ ಪಡಿಸಿದ್ದಾರೆ.
ಆಸ್ಪತ್ರೆಗೆ ತಾಪಂ ಅಧ್ಯಕ್ಷ ಭೇಟಿ
ಬೇಲೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಪರ್ವತಯ್ಯ ಭೆಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಶುಚಿತ್ವ ಹಾಗೂ ಹಾಜರಿ ಪುಸ್ತಕವನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಇತ್ತೀಚೆಗೆ ಹಾಜರಾತಿ ಸಮಯ ಪಾಲನೆಗಾಗಿ ಬಯೋವುಟ್ರಿಕ್ ತಂತ್ರವನ್ನು ಅಳವಡಿಸಲಾಗಿದ್ದು ಬೆಳಗ್ಗೆ 10 ಕ್ಕೆ ಒಳಗೆ ಶೇ.100 ರಷ್ಟು ಹಾಜರಾತಿ ದಾಖಲಾಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, 2 ದಿನಕ್ಕೊಮ್ಮೆ ಹಾಜರಾತಿ ಪ್ರಿಂಟ್ ತೆಗೆದು ಪರಿಶೀಲಿಸುವಂತೆ ಸೂಚಿಸಿದರು. ವೈದ್ಯಾಧಿಕಾರಿ ಡಾ.ನರಸೇಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ಹಿರಿಯ ಆಡಳಿತಾಧಿಕಾರಿಯ ಕೊರತೆ ಇದೆ. ಆಸ್ಪತ್ರೆಯನ್ನು 100 ಹಾಸಿಗೆ ಮೇಲ್ದರ್ಜೆಗೆ ಆಸ್ಪತ್ರೆಯ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ತಾಪಂ ಸದಸ್ಯ ಸುಬಾನ್ ಇದ್ದರು.
ಸಹಕಾರ ಸಂಘ ಉದ್ಘಾಟನೆ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ಹೋಬಳಿಯ ಹುಗೇನಹಳ್ಳಿಯಲ್ಲಿ ಇತ್ತೀಚೆಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆ ನೆರವೇರಿತು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಸಂಘ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 275 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಇದರಿಂದ ರೈತರಿಗೆ ವರದಾನವಾಗಿದೆ. ಇದರ ಹೆಚ್ಚಿನ ಶ್ರಮ ಮಾಜಿ ಸಚಿವ ಎಚ್.ಡಿ. ರೇವಣ್ಣನವರದ್ದಾಗಿದೆ ಎಂದು ಹೇಳಿದರು. ತಾಪಂ ಮಾಜಿ ಸದಸ್ಯ ಬಿ. ಪುಟ್ಟರಾಜು ಮಾತನಾಡಿದರು. ವಿಮಲಾ ರಘುರಾಮ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಣ್ಣ, ಮೇಲ್ವಿಚಾರಕ ತಿಮ್ಮೇಗೌಡ, ಎಂ.ಸಿ. ವಾಸು, ಡಿ. ತುಮಕೂರು ಉತ್ಪಾದಕ ಸಂಘದ ಅಧ್ಯಕ್ಷ ಎಲ್. ರವಿಕುಮಾರ್, ಟಿ.ಜಿ. ರವಿಕುಮರ್, ರವಿಕುಮಾರ್ ಇದ್ದರು.
ಸಾರ್ವಜನಿಕರ ಕೆಲಸ ಮಾಡಿಕೊಡಿ
ಬೇಲೂರು: ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಕೆಲಸ ಮಾಡದವರ ವಿರುದ್ಧ ಹೋರಾಟ ಮಾಡಲು ಕರವೇ ಸಿದ್ಧವಾಗಿದೆ ಎಂದು ಕರವೆ ತಾ.ಅಧ್ಯಕ್ಷ ಚಂದ್ರಶೇಖರ್ ಹೇಳಿದರು. ತಾಲೂಕಿನ ಅರೇಹಳ್ಳಿಯಲ್ಲಿ ಕರವೆ ಹೊಬಳಿ ಘಟಕದ ವತಿಯಿಂದ ಸರಕು ಸಾಗಾಣಿಕೆ ವಾಹನ ಚಾಲಕರ ಮತ್ತು ಮಾಲೀಕರ ಘಟಕ ಉದ್ಘಾಟಿಸಿ ಮಾತನಾಡಿ, ಅನ್ಯಾಯದ ವಿರುದ್ಧ ಹೋರಾಡಲು ಕರವೇ ಸಿದ್ಧವಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ನಾಗೇಶ್ ಶೆಟ್ಟಿ, ವಲೇರಿಯನ್ ಡಿಸೋಜ ಮಾತನಾಡಿದರು. ತಾಲೂಕು ಸಾಂಸ್ಕೃತಿಕ ಘಟಕದ ಅಧ್ಯಕ್ಷ ಹನುಮಯ್ಯ, ಬೇಲೂರು ನಗರ ಉಪಾಧ್ಯಕ್ಷ ರೋಮಿಸಸಜ್ಜಾದ್, ಅಣ್ಣಪ್ಪ, ಪ್ರಭಾಕರಶೆಟ್ಟಿ, ಕರವೇ ಶ್ರೀಕಾಂತ್ ಇದ್ದರು.
ದಸರಾ ಉನ್ನತ ಸಮಿತಿ ಸಭೆ 19ಕ್ಕೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜು.19ರ ಸಂಜೆ 4.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದೆ. ಸಂಬಂಧಿಸಿದ ಅಗತ್ಯ ಕ್ರಮ ಕೊಳ್ಳಲು ಹಾಗೂ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳ ಸಚಿವಾಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆಗಳಿಗೆ ತಿಳಿಸಿದ್ದು, ಮೈಸೂರು ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.