ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಸ ಸಂಗ್ರಹಿಸುವಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ

Vishwanath S
Updated On : 28 Jun 2014, 12:10 pm

ಚನ್ನರಾಯಪಟ್ಟಣ: ಕಸ ವಿಲೇವಾರಿಗಾಗಿ ಪುರಸಭೆ ವತಿಯಿಂದ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದು, ಅವರಿಂದ ಸರಿಯಾಗಿ ಕಸ ಸಂಗ್ರಹಿಸುತ್ತಿಲ್ಲ ಎಂದು  ಪುರಸಭಾ ಸದಸ್ಯರುಗಳು ಆಕ್ರೋಷ ವ್ಯಕ್ತಪಡಿಸಿದರು.
 ಪುರಸಭಾ ಅಧ್ಯಕ್ಷ ಸಿ.ಜಿ ಮಂಜಣ್ಣ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಮನೆ ಮನೆಯಿಂದ ಸಂಗ್ರಹಿಸದಿರುವ ಕಸದ ಬಗ್ಗೆ ಜನತೆ ದೂರು ನೀಡುತ್ತಿದ್ದು, ಸರಿಯಾಗಿ ಎತ್ತುವರಿ ಮಾಡದಿರುವ ಸಂಸ್ಥೆಗಳಿಗೆ ಆಯಾ ವಾರ್ಡಿನ ಸದಸ್ಯರ ಒಪ್ಪಿಗೆ ಪಡೆದು ನಂತರವೇ ಬಿಲ್ ನೀಡಬೇಕೆಂದು ಆಗ್ರಹಿಸಿದರು.
ಕಸ ವಿಲೇವಾರಿ ಮಾಡುತ್ತಿಲ್ಲ: ಕಳೆದ ಸಾಲಿನಲ್ಲಿ ಪುರಸಭೆಯಿಂದ ಒಪ್ಪಿಗೆ ಪಡೆದು ಮನೆಗಳಿಂದ ಕಸ ಸಂಗ್ರಹಿಸಿ ಮಾಸಿಕ ಪ್ರತಿ ಮನೆಯಿಂದ 20 ರು. ವಸೂಲಿ ಮಾಡುವಂತೆ ಒಪ್ಪಿಗೆ ನೀಡಲಾಗಿತ್ತು. ಆನಂತರದಲ್ಲಿ ಮನೆ ಮನೆ ಕಸ ಸಂಗ್ರಹಣೆ ಮಾಡಿದವರಿಗೆ ಹಣ ನೀಡದ ಕಾರಣ ಕಂದಾಯ ವಸೂಲಿ ಸಂದರ್ಭದಲ್ಲಿ ಪ್ರತಿ ಮನೆಯಿಂದ ವಾರ್ಷಿಕ ರು. 240 ವಸೂಲಿ ಮಾಡಿ ನೀಡುತ್ತಿರುವುದರಿಂದ ಟೆಂಡರ್ ಪಡೆದಿರುವ ಸಂಸ್ಥೆಯವರು ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
 ಸದಸ್ಯ ಪ್ರಕಾಶ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ಕಲ್ಯಾಣ ಮಂಟಪಗಳಿಂದ ಘನ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಸಮಾರಂಭಕ್ಕೆ 300 ನೀಡಬೇಕಾಗಿದ್ದು, ಅದನ್ನು ವಸೂಲಿ ಮಾಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದಾಗ, ಪರಿಸರ ಎಂಜಿನಿಯರ್ ವೆಂಕಟೇಶ್ ಉತ್ತರಿಸಿ ಪಟ್ಟಣದ ಕಲ್ಯಾಣ ಮಂಟಪದ ವ್ಯವಸ್ಥಾಪಕರೇ ಕಸವನ್ನು ಅವರವರ ತೋಟಕ್ಕೆ ಕೊಂಡೊಯ್ಯುತ್ತಿದ್ದು, ಅವರು ಹಣ ನೀಡುತ್ತಿಲ್ಲ ಎಂದರು.
 ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ತಮ್ಮ ವಾರ್ಡಿನ ಸಂಕಷ್ಠಗಳ ಬಗ್ಗೆ ಚರ್ಚಿಸಲು ಕನಿಷ್ಠ 10 ನಿಮಿಷವಾದರೂ ಅವಕಾಶ ನೀಡಬೇಕು. ಸಾಮಾನ್ಯ ಸಭೆ ಕೇವಲ ನಾಲ್ಕು ಮಂದಿ ಸದಸ್ಯರು ಪ್ರಶ್ನಿಸಲು ಮಾತ್ರ ಸೀಮಿತವಾಗಿದೆ. ಉಳಿದವರಿಗೆ ಸಮಸ್ಯೆಗಳಿಲ್ಲ ಎಂದು ತಿಳಿಯದೆ ಅವರಿಗೂ ಅವಕಾಶ ನೀಡುವ ಸೌಜನ್ಯತೆ ನೀಡಿ ಎಂದು ಸದಸ್ಯ ಶಶಿಧರ್ ಸಭೆಯ ಗಮನಕ್ಕೆ ತಂದರು.
ಕಬ್ಬಿಣದ ಪೈಪ್ ಅಳವಡಿಕೆ: ಪುರಸಭೆಯ ಅಭಿವೃದ್ಧಿಗಾಗಿ ಮೀಸಲಿರುವ ಹಣದಲ್ಲಿ ಗದ್ದೆ ರಾಮೇಶ್ವರ ಬಡಾವಣೆಯಲ್ಲಿ ಒಳಚರಂಡಿಗೆ ಅಳವಡಿಸಿರುವ ಸಿಮೆಂಟ್ ಪೈಪ್‌ಗಳು ಹಾಳಾಗಿದ್ದು, ಅವುಗಳನ್ನು ತೆಗೆದು ಹೊಸದಾಗಿ ಕಬ್ಬಿಣದ ಪೈಪ್‌ಗಳನ್ನು ಅಳವಡಿಸಲು 30ಲಕ್ಷ, ಬಳಕೆ ಮಾಡಲು ಸಭೆ ತೀರ್ಮಾನಿಸಿತು.
 ಪುರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿಯ ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಹಾಳಾಗಿದ್ದು, ತುರ್ತಾಗಿ ಅವುಗಳನ್ನು ಬದಲಿಸಲು ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.
 ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಪುರಸಭೆಗೆ ಸರ್ಕಾರದಿಂದ ಬರುವ ಅನುದಾನದ ಜತೆಗೆ ಇತರೆಡೆಗಳಿಂದ ಅನುದಾನವನ್ನು ಬಿಡಗಡೆ ಮಾಡಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸ್ಥಾಯಿ ಸಮತಿ ಅಧ್ಯಕ್ಷ ಕೆ.ಜೆ ಸುರೇಶ್, ಉಪಾಧ್ಯಕ್ಷೆ ಗೀತಾ ದಿನೇಶ್ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement