ನಾಯಕರ ಕಿತ್ತಾಟ; ಅಭಿವೃದ್ಧಿ ಮೂರಾಬಟ್ಟೆ
ಕನ್ನಡಪ್ರಭ ವಾರ್ತೆ, ಹಾಸನ, ಜೂ. 27
ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಆಯುಕ್ತರ ನಡುವಿನ ಕಿತ್ತಾಟದಿಂದ ನಗರಸಭೆಯು ಅವ್ಯವಸ್ಥೆಯ ಆಗರವಾಗಿದ್ದು, ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಂಡು ತೊಂದರೆಯಾಗುತ್ತಿದೆ ಎಂದು ನಗರಸಭೆ ಸದಸ್ಯ ಎಚ್.ಎಂ.ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಆಡಳಿತ ಪ್ರಾರಂಭವಾಗಿ 10 ತಿಂಗಳು ಕಳೆದಿದ್ದರೂ ಸರಿಯಾಗಿ ಸಾಮಾನ್ಯಸಭೆಗಳು ನಡೆಯುತ್ತಿಲ್ಲ. ಈವರೆಗೂ ಕೇವಲ ಎರಡು-ಮೂರು ಸಭೆಗಳು ನಡೆದಿವೆ. ಸಭೆಯಲ್ಲಿ 45 ರಿಂದ 50 ವಿಷಯಗಳನ್ನು ಚರ್ಚೆಗೆ ಇಡುವುದರಿಂದ ವಿಷಯಗಳ ಚರ್ಚೆ ಆಗುತ್ತಿಲ್ಲ. ಅದರಲ್ಲಿ ಹೆಚ್ಚಿನ ವಿಷಯಗಳು ಸಾರ್ವಜನಿಕ ಹಿತಾಸಕ್ತಿಗೆ ಬದಲಾಗಿ ಸ್ವಹಿತಾಸಕ್ತಿಯ ವಿಷಯಗಳೇ ಹೆಚ್ಚಾಗಿ ಇಡಲಾಗುತ್ತಿದೆ ಎಂದು ಕಿಡಿಕಾರಿದರು.
ಬಜೆಟ್ ರಗಳೆ: ಪ್ರಸಕ್ತ ಸಾಲಿನಗೆ 132 ಕೋಟಿ ಬೃಹತ್ ಬಜೆಟ್ ಮಂಡಿಸಿದ್ದಾರೆ. ಇದರಿಂದ ಸಾರ್ವಜನಿಕರ ನಿರೀಕ್ಷೆ ಕೂಡ ಹೆಚ್ಚಾಗಿದೆ. ಆದರೆ ಇದರಲ್ಲಿ ಹೆಚ್ಚುವರಿಯಾಗಿ ಮಂಡಿಸಿರುವ 60 ಕೋಟಿ ಅನುದಾನ ಜಿಲ್ಲಾಧಿಕಾರಿಗಳಿಗೆ ಬರಲಿದೆ. ಆದರೆ ನಗರಸಭೆಗೆ ಕೇವಲ 72 ಕೋಟಿ ಮಾತ್ರ ಬರಲಿದೆ. ಆದ್ದರಿಂದ ನಗರಸಭೆ ಅಧ್ಯಕ್ಷರು ರು. 72 ಕೋಟಿ ಬಜೆಟ್ ಅನ್ನೋದನ್ನು ಜನರಿಗೆ ಮತ್ತೊಮ್ಮೆ ಹೇಳಬೇಕು ಎಂದು ಒತ್ತಾಯಿಸಿದರು.
ಕಸ ವಿಲೇವಾರಿ ವಿಳಂಬ:
ನಗರದಲ್ಲಿ ಉತ್ಪತ್ತಿಯಾಗಿರುವಂತಹ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಆಯುಕ್ತರು ಕಸವನ್ನು ಬೇರ್ಡಪಡಿಸಿ ಅದರಿಂದ ಗೊಬ್ಬರವನ್ನು ತಯಾರಿಸುವುದಾಗಿ ಹೇಳಿ ತಿಂಗಳುಗಳೇ ಕಳೆಯುತ್ತಿದ್ದರು. ಸಹ ಈವರೆಗೂ ಕಸ ವಿಲೇವಾರಿ ಪ್ರಾರಂಭವಾಗಿಲ್ಲ. ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿದ್ದರೂ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಟೀಕಿಸಿದರು.
ಬೀದಿ ನಾಯಿಗಳ ಹಾವಳಿಗೆ ತುತ್ತಾಗಿದ್ದಂತಹ ಬಾಲಕನೋರ್ವನನ್ನು ಕಳೆದ ಸಭೆಯೊಳಗೆ ಕರೆತಂದು ಬಾಲಕನಿಗೆ ಪರಿಹಾರ ನೀಡುವಂತೆ ಕೇಳಲಾಗಿತ್ತು. ಆದರೆ ಈವರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲ.
ಹಣ ದುರುಪಯೋಗ: ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ರಕ್ತ ಸಂಬಂಧಿಕರು ನಗರಸಭೆಯಿಂದ ಯಾವುದೇ ರೀತಿಯ ಸಹಾಯಧನವನ್ನು ಪಡೆಯುವಂತೆ ಇಲ್ಲ ಎಂಬಂತಿದ್ದರು ಸಹ ಅಧ್ಯಕ್ಷರ ಸಹೋದರ ಅಂಗ ಜೋಡಣೆಗೆ ನಗರಸಭೆಯಿಂದ 85 ಸಾವಿರ ರು.ಹಣ ಪಡೆಯಿದ್ದಾರೆ. ಅದೇ ರೀತಿ ಅಧ್ಯಕ್ಷರ ತಾಯಿ 50 ಸಾವಿರ ರು.ಗಳ ಸಹಾಯಧನವನ್ನು ನಗರಸಭೆಯಿಂದ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ರಮೇಶ್ ಬಾಬು ಮತ್ತು ಪ್ರಸನ್ನಕುಮಾರ್ ಇದ್ದರು.