30ರೊಳಗೆ ಮರಣೋತ್ತರ ಪರೀಕ್ಷೆ ವರದಿಗೆ ಸೂಚನೆ
ಹಾಸನ: ಇತ್ತೀಚೆಗಷ್ಟೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ 2 ತಿಂಗಳ ಗಂಡು ಮಗುವಿನ ಮರಣೋತ್ತರ ಪರೀಕ್ಷೆ ವರದಿ ಜೂ.30 ರೊಳಗೆ ನೀಡುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಆದೇಶಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ಮೂವರ ತಂಡವನ್ನು ರಚಿಸಿದ್ದು, ಮೃತಪಟ್ಟ ಮಗುವಿನ ಮರಣೋತ್ತರ ಪರೀಕ್ಷೆಯ ನಂತರ ವರದಿ ನೀಡುವಂತೆ ಆದೇಶಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸಲಾಗುತ್ತಿದೆ. ತನಿಖೆ ನಂತರ ಮುಂದಿನ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಗುವಿನ ಪೋಷಕರು ಅಂಗ ವೈಕಲ್ಯವಾಗಿರುವುದಿರಂದ ಅವರಿಗೆ ಮಾಸಾಶನ ನೀಡಲಾಗುತ್ತದೆ. ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ವೈದ್ಯಕೀಯ ಕಾಲೇಜಿನ ನಿರ್ದೇಶಕರು, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೇರಿದಂತೆ ಇತರರ ಸಭೆ ನಡೆಸಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಕೂಡಲೇ ಅಂದಾಜು ಪಟ್ಟಿ ಸಿದ್ಧಪಡಿಸಿ ಜು.2 ರಂದು ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರಸ್ತುತ 2 ಕೋಟಿ ರು.ಹಣವಿದ್ದು, ಈ ಪೈಕಿ 1 ಕೋಟಿ ಯನ್ನು ಬ್ಯಾಂಕ್ನಲ್ಲಿ ಡೆಪಾಸಿಟ್ ಇಡಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ದುರಸ್ತಿ ಕಾರ್ಯಗಳಿಗೆ ಅದನ್ನು ಬಳಿಸಿಕೊಳ್ಳಬಹುದಾಗಿದೆ. ಶವಾಗಾರ ದುರುಸ್ತಿ, ಸಿಸಿ ಟಿವಿ ಅಳವಡಿಕೆ, ಬಯೋವುಟ್ರಿಕ್ ವ್ಯವಸ್ಥೆ, ಕುಡಿಯುವ ನೀರು, ಆಸ್ಪತ್ರೆಗೆ ಪೊಲೀಸ್ ಬಂದೋಬಸ್ತ್ ಸೇರಿದಂತೆ ಇತರೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಹೆಗ್ಗಣ ತಿಂದ ಪ್ರಕರಣ
ಇಬ್ಬರ ಅಮಾನತು
ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ 2 ತಿಂಗಳ ಮಗುವಿನ ಮೃತದೇಹವನ್ನು ಹೆಗ್ಗಣಗಳು ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯ ಡಿ ದರ್ಜೆ ನೌಕರ ಪರಮೇಶ್ ಎಂಬುವರನ್ನು ಅಮಾನತು ಮಾಡಲಾಗಿದೆ. ಈಗ ಗಂಗಯ್ಯ ಎಂಬುವರನ್ನೂ ಅಮಾನತು ಮಾಡಲಾಗಿದ್ದು, ಪ್ರಕರಣ ತನಿಖೆ ನಡೆಸಲಾಗುತ್ತಿದೆ.