ವೃತ್ತಿಶಿಕ್ಷಣ ಸೀಟು ಹಂಚಿಕೆ
ಹಾಸನ: ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಬಡ ಪ್ರತಿಭಾಂತರಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರ ಕೈಗೊಂಡಿರುವ ಶಾಶ್ವತ ಕ್ರಮಗಳ ಬಗ್ಗೆ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಇಲ್ಲಿನ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಪರಿಷತ್ನಲ್ಲಿ ಉತ್ತರಿಸುತ್ತಾ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶಾತಿಗಳನ್ನು ಮೆರಿಟ್ ಹಾಗೂ ಮೀಸಲಾತಿಯನ್ವಯ ಸಿಇಟಿ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಿಂದ ಜಾರಿ: ರಾಜ್ಯದಲ್ಲಿ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಯಂತ್ರಣ) ಕಾಯ್ದೆ 2006ನ್ನು 2014-15 ನೇ ಸಾಲಿನಿಂದ ಜಾರಿಗೆ ತರಲು ತೀರ್ಮಾನಿಸಿದ್ದು, ಆದರೆ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಯದ ಮೇರೆಗೆ ಸದರಿ ಕಾಯ್ದೆಯನ್ನು ತಡೆಹಿಡಿದು ಹಿಂದಿನ ಸಾಲಿನಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಸಮ್ಮತಾಭಿಪ್ರಾಯದ ಒಪ್ಪಂದದ ಮೇರೆಗೆ ಸಿಇಟಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಹೊಸ ಕಾನೂನು ರೂಪಿಸಲು ಕೋರಲಾಗಿಲ್ಲ ಎಂದು ಸಚಿವರು ತಿಳಿಸಿದರು.