ಶಾಲೆಗೆಂದು ಹೋದ ಇಬ್ಬರು ಮಕ್ಕಳು ನಾಪತ್ತೆ
ಹೊಳೆನರಸೀಪುರ: ಶಾಲೆಗೆಂದು ಹೋದ ಒಂದೇ ಮನೆಯ ಎರಡು ಮಕ್ಕಳು ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವ ಪ್ರಕರಣ ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ಸಿಂಗನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಈ ಕುರಿತಂತೆ ಅಜ್ಜ ಭದ್ರಪ್ಪ ಎಂಬುವವರು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಲೆಗೆ ಹೋಗಿಲ್ಲ: ಹಳ್ಳಿಮೈಸೂರಿನ ಅನುಗ್ರಹ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಮೋಹನ(13) ಹಾಗೂ 1ನೇ ತರಗತಿಯಲ್ಲಿ ಓದುತ್ತಿದ್ದ ಕುಮುದಾ ದೀಕ್ಷಿತ್(6) ಎಂಬ ಒಂದೇ ಮನೆಯ ಮಕ್ಕಳಿಬ್ಬರೂ ಶಾಲೆಗೆ ಹೋಗಲು ಬಸ್ಸಿನಲ್ಲಿ ಸಿಂಗನಕುಪ್ಪೆ ಗ್ರಾಮದಿಂದ ಶನಿವಾರದಂದು ಹಳ್ಳಿಮೈಸೂರಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಶಾಲೆಗೆ ಹೋದ ತಮ್ಮ ಮೊಮ್ಮಕ್ಕಳಿಬ್ಬರೂ ಮನೆಗೆ ಮರಳಿ ಮನೆಗೆ ಬಂದಿಲ್ಲ ಎಂದು ಆತಂಕಗೊಂಡ ಪೋಷಕರು ಶಾಲೆಗೆ ತೆರಳಿ ವಿಚಾರಿಸಲಾಗಿ, ಈ ಮಕ್ಕಳಿಬ್ಬರೂ ಶನಿವಾರದಂದು ಶಾಲೆಗೆ ಬಂದಿಲ್ಲವೆಂಬ ಉತ್ತರ ದೊರೆತಿದೆ. ಸಿಂಗನಕುಪ್ಪೆ ಗ್ರಾಮದ ಭದ್ರಪ್ಪ ಅವರ ಮಗಳು ಅನುರಾಧ ಅವರ ಗಂಡ ಮದುವೆಯಾದ ಒಂದು ವರ್ಷದಲ್ಲಿ ಮೃತಪಟ್ಟಿದ್ದು, ಭದ್ರಪ್ಪ ಮಗಳು ಹಾಗೂ ಮೊಮ್ಮಗನಾದ ಮೋಹನ ಅವರನ್ನು ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದರಲ್ಲದೇ, ತಮ್ಮ ಇನ್ನೊಬ್ಬಳು ಮಗಳಾದ ಶಶಿಕಲಾ ಅವರ ಮಗಳು ಕುಮುದಾ ದೀಕ್ಷಿತ್ ಎಂಬ ಮಗುವನ್ನೂ ಕೂಡ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದರು. ಇವರನ್ನು ತಮ್ಮ ಗ್ರಾಮದಿಂದ ಪ್ರತಿ ನಿತ್ಯವೂ ಹಳ್ಳಿಮೈಸೂರಿನ ಅನುಗ್ರಹ ಕಾನ್ವೆಂಟಿಗೆ ಕಳಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಎಸ್ಸೈ ಲೋಕೇಶ್ ಮಕ್ಕಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.