ಶಾಸನ ಅಧ್ಯಯನದಷ್ಟೇ ರಕ್ಷಣೆಯೂ ಮುಖ್ಯ
ಚನ್ನರಾಯಪಟ್ಟಣ: ಶಾಸನಗಳು ಹಾಗೂ ಅವುಗಳ ಸಂಸ್ಕರಣೆ ಮಾಡುವಲ್ಲಿ ಲೂಯಿಸ್ ರೈಸ್ ಅವರ ಕೊಡುಗೆ ಅಪಾರ ಎಂದು ಸಾಹಿತಿ ಹಾಗೂ ಚಿಂತಕ ಡಾ.ಕುಮಾರಚಲ್ಯ ತಿಳಿಸಿದರು.
ಶ್ರವಣಬೆಳಗೊಳದ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವದ ಅಂಗವಾಗಿ ಕಾನಜಿ ಸ್ವಾಮಿ ಯಾತ್ರಿಕಾಶ್ರಮದಲ್ಲಿ ಏರ್ಪಡಿಸಿದ್ದ ಲೂಯಿಸ್ ರೈಸ್ ಅಭಿವಂದನೆ ಹಾಗೂ ಶಾಸನ ಸಾಹಿತ್ಯ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ ಲೂಯಿಸ್ ರೈಸ್ ವಿದೇಶಿಯರಾಗಿದ್ದರೂ ಶಾಸನಗಳ ಬಗ್ಗೆ ಅಧ್ಯಯನ ನಡೆಸುವ ಜತೆಗೆ ಅವುಗಳನ್ನು ಸಂರಕ್ಷಣೆ ಮಾಡುವಲ್ಲಿ ಅವರ ಪರಿಶ್ರಮವನ್ನು ತಾವೆಂದು ಮರೆಯುವಂತಿಲ್ಲ ಎಂದು ತಿಳಿಸಿದರು.
ಎಪಿಗ್ರಪಿ ಆಫ್ ಕರ್ನಾಟಕ: ಕರ್ನಾಟಕದ ಶಾಸನಗಳನ್ನು ನಾವಿಂದು ಅಧ್ಯಯನ ಮಾಡುತ್ತಿರಲು ಲೂಯಿಸ್ ಕಾರಣವಾಗಿದ್ದು, ಅವರ ಎಪಿಗ್ರಪಿ ಆಫ್ ಕರ್ನಾಟಕ ಹಲವು ಸಂಪುಟಗಳನ್ನು ರಚಿಸಿ ರಾಜ್ಯದಲ್ಲಿನ ಇತಿಹಾಸವನ್ನು ನೆನಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಸಾರ ಅರ್ಥ ಮಾಡಿಕೊಳ್ಳಿ: ಕೆಲವು ಗ್ರಂಥಗಳನ್ನು ನಾವಿಂದು ಓದಿ ತಿಳಿಯಬೇಕಾದುದು ಸಾಕಷ್ಟಿದ್ದರೂ ಅದನ್ನು ಓದಲು ಮುಂದಾಗದೆ ಅನಗತ್ಯವಾದ ಸಾಹಿತ್ಯವನ್ನು ಓದಿ ತಮ್ಮ ಮನಸ್ಸನ್ನು ವಿಕೃತಮಾಡಿಕೊಳ್ಳುವ ಮಟ್ಟಕ್ಕೆ ತಲುಪಿದ್ದು, ಓದಲು ಕಷ್ಟವಿದ್ದರೂ ಅವುಗಳಲ್ಲಿನ ಸಾರವನ್ನು ತಿಳಿಯುವ ಯತ್ನ ಮಾಡಬೇಕು ಎಂದು ತಿಳಿಸಿದರು.
ಹಳ್ಳಿ ಹಳ್ಳಿಗಳನ್ನು ಸುತ್ತಿ ಶಾಸನಗಳ ಸಂಗ್ರಹಿಸಿದ ಲೂಯಿಸ್ ಜೀವನ ಚರಿತ್ರೆಯ ಪುಸ್ತಕವನ್ನು ಹೊರತರುವುದು ಅಗತ್ಯವಿದೆ. ಶ್ರೀ ಮಠದವರು ಈ ಬಗ್ಗೆ ಆಸಕ್ತಿ ತೋರಿದರೆ ತಾವು ಅವರ ಜೀವನ ಚರಿತ್ರೆಯ ತುಣುಕುಗಳನ್ನು ಪುಸ್ತಕದ ರೂಪದಲ್ಲಿ ನೀಡಲಿದ್ದೇನೆ ಎಂದರು.
ದೇಶಿಯ ಸಂಸ್ಕೃತಿ ಉಳಿಯಬೇಕು: ಲೂಯಿಸ್ ಅವರು ತಮ್ಮ ಸಂಸ್ಕೃತಿ, ಸಾಹಿತ್ಯ ಹಾಗೂ ಶಾಸನಗಳನ್ನು ಉಳಿಸುವಲ್ಲಿ ವಿದೇಶಿಯರಾಗಿದ್ದರೂ ಅವರು ತಮ್ಮ ಸಂಸ್ಕೃತಿಗೆ ಮಾರು ಹೋಗಿ ಉಳಿಸಿ ಬೆಳೆಸುವ ಯತ್ನದಲ್ಲಿ ತೊಡಗಿಸಿಕೊಂಡರು. ಆದರೆ ಇಂದಿನ ಯುವ ಜನತೆಯಲ್ಲಿ ಸಂಸ್ಕೃತಿಯೇ ಇಲ್ಲದಾಗಿದೆ. ಯುವಜನತೆಯಲ್ಲಿ ಚಂಚಲ ಮನಸ್ಥಿತಿ ಹೆಚ್ಚಾಗುತ್ತಿದ್ದು, ಎಲ್ಲಾ ಕ್ಷೇತ್ರದಲ್ಲಿಯೂ ಮರೆವು ಹೆಚ್ಚುತ್ತಿದೆ ಎಂದು ತಿಳಿಸಿದರು. ಹಿಂದೆ ಅವಿಭಕ್ತ ಕುಟುಂಭಗಳಲ್ಲಿ ವೃದ್ಧರನ್ನು ಅತ್ಯಂತ ಪೂಜ್ಯ ಮನೋಭಾವದಿಂದ ಕಾಣುತ್ತಿದ್ದವು. ಇಂದು ವೃದ್ದರನ್ನು ನಿರ್ಲಕ್ಷ ಮಾಡುತ್ತಿರುವುದರಿಂದ ವೃದ್ದಾಶ್ರಮಗಳು ಹೆಚ್ಚುತ್ತಿವೆ. ಲೂಯಿಸ್ ಅವರು ತಮ್ಮ 90ನೇ ವಯಸ್ಸಿನಲ್ಲಿ ಬ್ರಿಟನ್‌ನಲ್ಲಿ ಏರ್ಪಡಿಸಿದ್ದ ಶಾಸನಗಳ ಕುರಿತ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲು ತಮ್ಮ ಮೊಮ್ಮಕ್ಕಳ ಜತೆ ಆಗಮಿಸಿದ್ದನ್ನು ನೆನಪಿಸಿಕೊಂಡಂಡರು.
ರಾಗದ್ವೇಷ ಬಿಡಿ: ಶ್ರೀ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಮನುಷ್ಯ ರಾಗದ್ವೇಷಗಳನ್ನು ಬಿಟ್ಟು ಉತ್ತಮ ಸಂಸ್ಕಾರದಲ್ಲಿ ನಡೆದಾಗ ಆತ ಒಬ್ಬ ದೀಮಂತ ವ್ಯಕ್ತಿಯಾಗುತ್ತಾನೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಜೀವಂಧರ್ ಕುಮಾರ್ ಹೋತಪೇಟಿ ಮಾತನಾಡಿ ಲೂಯಿಸ್ 9 ಸಾವಿರ ಶಾಸನಗಳನ್ನು ಪತ್ತೆ ಹಚ್ಚಿ ಅದರಲಿ ್ಲರುವ ಸಾರವನ್ನು ಜನತೆಗೆ ನೀಡಿರುವುದರಿಂದ ತಾವು ಇತಿಹಾಸದಲ್ಲಿನ ಆಗು ಹೋಗುಗಳನ್ನು ತಿಳಿಯಲು ಸಾಧ್ಯವಾಗಿದೆ ಎಂದರು.
ಶಾಸನ ಅಧ್ಯಯನ: ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸೇರಿದಂತೆ ರಾಜ್ಯದಲ್ಲಿ ಹಲವು ಶಾಸನಗಳಿದ್ದು, ಅವುಗಳನ್ನು ಇದುವರಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕೆಲ ಆವಿಷ್ಕಾರಗಳ ಮೂಲಕ ಶಾಸನಗಳನ್ನು ಅಧ್ಯಯನ ಮಾಡಿದರೆ ಹಲವು ಇತಿಹಾಸಗಳನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು.