ಹಕ್ಕುಗಳು ಸದುಪಯೋಗವಾಗಲಿ
ಅರಸೀಕೆರೆ: ಸರ್ಕಾರ ಸಂವಿಧಾನ ಬದ್ದವಾಗಿ ಹೆಣ್ಣು ಮಕ್ಕಳಿಗೆ ನೀಡಿರುವ ಸಮಾನತೆ ಹಕ್ಕನ್ನು ಉಪಯೋಗಿಸಿಕೊಂಡು ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲು ಮುಂದಾಗಬೇಕೆಂದು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಈ. ಚಂದ್ರಕಲಾ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಾವುದೇ ಧರ್ಮ, ಜಾತಿ ಭೇದ ಮತ್ತು ಲಿಂಗ ಭೇದ ಇಲ್ಲದೆ ಎಲ್ಲರೂ ಸಮಾನತೆಯಿಂದ ಜೀವಿಸುವ ಹಕ್ಕನ್ನು ಉಳ್ಳವರಾಗಿದ್ದಾರೆ ಎಂದರು.
ಹಿರಿಯ ಪ್ರಧಾನ ಸಿವಿಲ್ನ್ಯಾಯಾಧೀಶರಾದ ದೇವಾನಂದ್ ಮಾತನಾಡಿ, ಮಹಿಳೆಯರ ಶೋಷಣೆ, ಹೆಣ್ಣು ಮಕ್ಕಳ ಮಾರಾಟ ಮತ್ತು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಸರ್ವೇಶ್ ಮತ್ತು ಸಹಾಯಕ ಸರ್ಕಾರಿ ವಕೀಲ ಮಮತ, ಹೆಣ್ಣು ಮಕ್ಕಳಿಗೆ ಸರ್ಕಾರ ರೂಪಿಸಿರುವ ವಿಶೇಷ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ಕಾನೂನು ಚಿಕಿತ್ಸಾ ಕೇಂದ್ರದ ವಕೀಲ ಆರ್. ವಿಜಯಕುಮಾರ್ ಮಕ್ಕಳ ಹಕ್ಕುಗಳು ಮತ್ತು ಹೆಣ್ಣು ಮಕ್ಕಳ ಸಂರಕ್ಷಣೆ ಕಾಯ್ದೆ ಕುರಿತು ಮಾತನಾಡಿದರು. ವಕೀಲ ಸಿದ್ದಮಲ್ಲಪ್ಪ ಬಾಲ ಕಾರ್ಮಿಕರ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಚ್.ಪ್ರಕಾಶ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಇದ್ದರು.