ಕೃಷಿ ಸವಲತ್ತು ಸದ್ಬಳಕೆಯಾಗಲಿ
ಆಲೂರು: ಕೃಷಿ ಇಲಾಖೆ ವತಿಯಿಂದ ತಾಲೂಕಿನ ಪಾಳ್ಯ ಹೋಬಳಿಯ ಹಳೇ ಪಾಳ್ಯದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ ಇತ್ತೀಚೆಗೆ 2014-15 ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಬೀಜೋಪಚಾರ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಕಾಂತರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಜತೆಗೆ ಇಲಾಖೆಯ ನಿಖರ ಸಂಪರ್ಕವನ್ನು ಇಟ್ಟುಕೊಂಡು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.
ತಾಂತ್ರಿಕ ಮಾಹಿತಿ: ಜೆಡಿಎಸ್ ತಾಲೂಕು ಅಧ್ಯಕ್ಷ ಕಣದಹಳ್ಳಿ ಮಂಜೇಗೌಡ ಮಾತನಾಡಿ, ರೈತರಿಗೆ ಗ್ರಾಮ ಮಟ್ಟದ ತಾಂತ್ರಿಕ ಮಾಹಿತಿ ನೀಡಲು, ಈ ನಿಟ್ಟಿನಲ್ಲಿ ಪ್ರತಿ ರೈತರನ್ನು ಭೇಟಿ ಮಾಡಿ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡುವುದಕ್ಕಿಂತ ಗುಂಪುಗಳ ಮುಖಾಂತರ ಉತ್ತಮವಾಗಿರುತ್ತದೆ. ಜೊತೆಗೆ ಇಲಾಖೆ ಜೊತೆ ಸಂಪರ್ಕವಿಟ್ಟುಕೊಂಡು ಕೃಷಿ ಹಾಗೂ ಕೃಷಿ ಸಂಬಂದಿತ ಇಲಾಖೆಗಳ ಯೋಜನೆಗಳನ್ನು ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕೇಂದು ತಿಳಿಸಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಸವರಾಜು ಮಾತನಾಡಿ, ಬಿತ್ತನೆ ಬೀಜವನ್ನು ಬಿತ್ತನೆಗೆ ಮೊದಲು ರೋಗನಾಶಕ, ಕೀಟನಾಶಕ ಜೈವಿಕ ಗೊಬ್ಬರಗಳಿಂದ ಉಪಚರಿಸಿದಲ್ಲಿ ಕೀಟ ರೋಗಗಳ ನಿಯಂತ್ರಣ ಹಾಗೂ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು.
ರೈತ ಮುಖಂಡ ಹೊನ್ನಪ್ಪ ಅವರು ಕೃಷಿ ಇಲಾಖೆಯ ತರಬೇತಿ ಕಾರ್ಯಕ್ರಮ ಹಾಗೂ ಕೃಷಿ ಮೇಳಕ್ಕೆ ಭಾಗವಹಿಸಿದ್ದ ಅನುಭವ ಅದರ ಪ್ರಾಮುಖ್ಯತೆಯನ್ನು ರೈತರ ಬಳಿ ಹಂಚಿಕೊಂಡರು. ಯುಪಿಸಿಎಲ್ ಕಂಪನಿಯ ಮನು, ಕೃಷಿ ಅಧಿಕಾರಿ ಹೆಚ್.ಜೆ.ಪ್ರಸಾದ್ ಮಾತನಾಡಿದರು.
ರಸಗೊಬ್ಬರ ಹೆಚ್ಚು ಬಳಸಬೇಡಿ: ತಾಂತ್ರಿಕ ಅಧಿಕಾರಿ ವಿನಯ್ ಮಾತನಾಡಿ, ರಸಗೊಬ್ಬರವನ್ನು ಅತಿಯಾಗಿ ಉಪಯೋಗಿಸದರೆ ಮಣ್ಣಿನ ಸತ್ವವು ನಾಶವಾಗುವುದರ ಜೊತೆಗೆ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಸಾವಯವ ಗೊಬ್ಬರದ ಜೊತೆಗೆ ಮಿತ ರಸಗೊಬ್ಬರ ಬಳಕೆ ಮಾಡಿದರೆ ಪರಿಸರವನ್ನು ಕಾಪಾಡಿಕೊಂಡು ಸುಸ್ಥಿರ ಕೃಷಿಯಿಂದ ರೈತರ ಜೀವನ ಮಟ್ಟವನ್ನು ಸುದಾರಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕ ಕೆ.ಟಿ.ಕಿಶೋರ್, ಗ್ರಾಪಂ ಸದಸ್ಯ ರಂಗೇಗೌಡ, ಕಾಳಯ್ಯ, ವೆಂಕಟೇಶ, ರಾಜು, ಷಣ್ಮುಖ, ಭರಣಿ ಹಾಗೂ ರೈತ ಅನುವಗಾರರಾದ ಭರತೇಶ್, ಮಧು, ಯಶೋದ, ಕುಮಾರಿ ಹಾಗೂ ಸ್ಥಳಿಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.