ಹೇಮೆ ಒಡಲು ಖಾಲಿ ಖಾಲಿ...
ಪಿ. ರವಿಕುಮಾರ್
ಹಾಸನ: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವಾತಿ ಜಲಾಶಯ ಜೂನ್ ಕಳೆದು ಜುಲೈ ಸಮೀಪಿಸುತ್ತಿದ್ದರೂ, ಭರ್ತಿಯಾಗುವ ಕುರುಹು ಕಾಣುತ್ತಿಲ್ಲ. ಮುಂಗಾರು ಮಛಳೆ ಕೈಕೊಟ್ಟಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಇದರಿಂದ ಕುಡಿಯುವ ನೀರಿಗೆ ಹಾಗೂ ನೀರಾವರಿ ಬೆಳೆಗೆ ತೊಡಕುಂಟಾಗಿದೆ.
ಅಣೆಕಟ್ಟೆ ನಿರ್ಮಾಣವಾಗಿ 30 ವರ್ಷಗಳ ಅಂತದರಲ್ಲಿ ಜುಲೈನಲ್ಲೇ ಡ್ಯಾಂ ಭರ್ತಿಯಾಗಿದ್ದು ಕಳೆದ ವರ್ಷವೇ ಮೊದಲು. ಹೀಗಾಗಿ ಜುಲೈ ಕೊನೆ ವಾರದಲ್ಲೇ ಜಲಾಶಯದಿಂದ 6 ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊರ ಬಿಡಲಾಗಿತ್ತು. ಆದರೆ ಈ ಬಾರಿ ಜೂನ್ ಮುಗಿದು ಜುಲೈ ಸಮೀಪಿಸುತ್ತಿದ್ದರೂ, ಮಳೆ ಕೈಕೊಟ್ಟಿರುವುದರಿಂದ ಜಲಾಶಯ ಬೇಗ ಭರ್ತಿಯಾಗುವ ಸಾಧ್ಯತೆ ಇಲ್ಲದಂತಾಗಿದೆ. ಕೊಡಗಿನಲ್ಲಿ ಮಳೆಗಾಗಿ ವಿಶೇಷ ಪೂಜೆ ಮಾಡುವ ಪದ್ಧತಿ ನಡೆಯುತ್ತಿದ್ದು, ಎಲ್ಲೆಡೆ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಒಳ ಹರಿವೂ ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜಲಾಶಯದ 2,922 ಅಡಿ ಗರಿಷ್ಠ ಮಟ್ಟವಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 2,885 ಅಡಿ ನೀರಿತ್ತು. ಒಟ್ಟು 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 11.804 ಟಿಎಂಸಿ ನೀರಿತ್ತು. ಇದರಲ್ಲಿ 7.432 ಟಿಎಂಸಿ ನೀರನ್ನು ಬಳಸ ಬಹುದಾಗಿತ್ತು. ಇದೇ ಅವಧಿಗೆ ಕಳೆದ ವರ್ಷ ಜಲಾಶಯಕ್ಕೆ 8,394 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರು ಸಂಗ್ರಹ ಮತ್ತು ಒಳ ಹರಿವು ಗಣನೀಯವಾಗಿ ಕಡಿಮೆಯಾಗಿದೆ.
ಜಲಾಶಯದ ಇಂದಿನ ನೀರಿನ ಮಟ್ಟ ಕೇವಲ 2,876 ಅಡಿ ನೀರಿದ್ದು, 8.125 ಟಿಎಂಸಿ ಮಾತ್ರ ನೀರಿದೆ. ಈ ಪೈಕಿ ಬಳಸ ಬಹುದಾದುದು ಕೇವಲ 3.753 ಟಿಎಂಸಿ ಮಾತ್ರ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ತೀರಾ ದುರ್ಬಲವಾಗಿರುವುದರಿಂದ ಜಲಾಶಯಕ್ಕೆ ಕೇವಲ 675 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ನೀರಾವರಿಗೆ ತೊಂದರೆ: ಹೇಮಾವತಿ ಜಲಾಶಯ ಭರ್ತಿ ಆಗದೇ ಹೋದರೆ ನೀರಾವರಿಗೆ ಹೇಮಾವತಿ ನೀರನ್ನೇ ನಂಬಿರುವ ಲಕ್ಷಾಂತರ ರೈತರಿಗೆ ದೊಡ್ಡ ಹೊಡೆತ ಬೀಳಲಿದೆ.
ಏಕೆಂದರೆ ಕಳೆದ ಹಲವು ದಶಕಗಳಿಂದಲೂ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಸುಮಾರು 6 ಲಕ್ಷ ರೈತರು, ಬತ್ತ ಇತ್ಯಾದಿ ನೀರಾವರಿ ಬೆಳೆ ಬೆಳೆಯಲು ಹೇಮಾವತಿಯನ್ನೇ ನಂಬಿಕೊಂಡಿದ್ದಾರೆ. ಈಗಾಗಲೇ ಬತ್ತದ ಗದ್ದೆ ಉಳಿಮೆ ಮಾಡೋ, ಸಸಿ ಮಡಿ ಹಾಕೋ ಕೆಲಸ ಪ್ರಾರಂಭವಾಗಿದೆ.
ರೈತರಿಗೆ ನೀರು ಸಿಕ್ಕರೆ ಜುಲೈನಲ್ಲಿ ಬತ್ತದ ನಾಟಿ ಕಾರ್ಯ ಆರಂಭವಾಗಬೇಕು. ಆದ್ರೆ ಹೇಮಾವತಿ ನೀರು ಇನ್ನೂ ತಳಮಟ್ಟದಲ್ಲೇ ಇರುವುದರಿಂದ ನೀರಾವರಿಗೆ ನೀರು ಸಿಗುತ್ತೋ ಇಲ್ಲವೋ ಅನ್ನೋ ಕೊರಗು, ಲಕ್ಷಾಂತರ ಮಂದಿ ರೈತರಿಗೆ ಕಾಡ ತೊಡಗಿದೆ.
ಡ್ಯಾಂ ನಿಂದ 1500 ಕ್ಯುಸೆಕ್ ನೀರು ಹೊರಕ್ಕೆ: ಜಲಾಶಯಕ್ಕೆ ಒಳಹರಿವು ಹೆಚ್ಚಿಲ್ಲದೆ ನೀರು ಸಂಗ್ರಹವೂ ತೃಪ್ತಿಕರವಾಗಿಲ್ಲ. ಆಗಲೇ ಹೇಮೆಯಿಂದ 1,500 ಕ್ಯುಸೆಕ್ ನೀರನ್ನು ನದಿಯ ಮೂಲಕ ಹೊರ ಬಿಡಲಾಗುತ್ತಿದೆ.
ಇದಕ್ಕೆ ಸರ್ಕಾರ ಮತ್ತು ಡ್ಯಾಂನ ಅಧಿಕಾರಿಗಳು ನೀಡುತ್ತಿರುವ ಕಾರಣ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರಿಲ್ಲ ಅನ್ನೋದು. ಈ ಕಾರಣದಿಂದಲೇ ಹೇಮೆಯಿಂದ ನೀರನ್ನು ಹೊರಹರಿಸಿದರೆ, ಹೇಮೆ ಪಾತ್ರದ ಜನರು ವರುಣ ಕೃಪೆ ತೋರದೇ ಹೋದರೆ ನೀರಾವರಿಗೆ ಇರಲಿ ಕುಡಿಯುವ ನೀರಿಗೆ ಏನು ಮಾಡಬೇಕು ಅನ್ನೋದು ಈ ಭಾಗದ ಜನರ ಪ್ರಶ್ನೆಯಾಗಿದೆ.
ಕಳೆದ ವರ್ಷವೂ ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಬೆಂಗಳೂರು-ಮೈಸೂರು ನಗರಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರಿದೆ ಎಂದು ಹೇಮಾವತಿಯಿಂದ 1 ಟಿಎಂಸಿ ನೀರನ್ನು ಕೆಆರ್ಎಸ್ಗೆ ಹರಸಲಾಗಿತ್ತು. ಈ ಬಾರಿಯೂ ಅಂಥದೇ ಸನ್ನಿವೇಶ ಸೃಷ್ಟಿಯಾದರೆ, ಹೇಮೆ ಬೇಗನೇ ಖಾಲಿಯಾಗಲಿದ್ದಾಳೆ ಅನ್ನೋದು ಈ ಭಾಗದ ಜನರ ಆತಂಕವಾಗಿದೆ.