ನೀರಿನ ಬರ ನೀಗಲು ಸಂಸದ-ಶಾಸಕರ ನಿಧಿ ಬಳಸಿ
ಕ.ಪ್ರ. ವಾರ್ತೆ ಹಾಸನ ಮಾ. 1
ಸಂಸದರ ಹಾಗೂ ಶಾಸಕರ ನಿಧಿಯ ಅನುದಾನವನ್ನು ಸಂಪೂರ್ಣವಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಬಳಸಿಕೊಳ್ಳುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು, ಜಿಲ್ಲೆಯ ಜೆಡಿಎಸ್ ಶಾಸಕರ ಅನುದಾನವನ್ನು ಸಂಪೂರ್ಣವಾಗಿ ಕುಡಿಯುವ ನೀರಿಗೆ ಬಳಸಿಕೊಳ್ಳಿ ಎಂದು ಹೇಳಿದರು.
ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಇದರಿಂದ ಇಲ್ಲಿನ ಜನರು ಮತದಾನವನ್ನು ಬಹಿಷ್ಕಾರ ಮಾಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ಇಷ್ಟಾದರೂ ಸಹ ಕುಡಿಯುವ ನೀರಿಗೆ ಅನುದಾನವನ್ನು ಸರಿಯಾಗಿ ನೀಡದಿರುವುದು ವಿಪರ್ಯಾಸ ಎಂದು ಅಸಮಧಾನ ವ್ಯಕ್ತಪಡಿಸಿದರು
ಶಾಸಕ ಶಿವಲಿಂಗೇಗೌಡ ಮಾತನಾಡಿ, ಬರಪೀಡಿತ ತಾಲೂಕುಗಳ ಪಟ್ಟಿಗೆ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳನ್ನು ಸೇರಿದಲು ಹೋರಾಟವನ್ನು ಮಾಡಬೇಕಾಯಿತು. ಅಧಿವೇಶನದಲ್ಲಿ ರು. 186 ಕೋಟಿ ಗಳನ್ನು ಕುಡಿಯುವ ನೀರಿಗೆ ನೀಡಲಾಗಿದೆ ಅಂತ ಹೇಳುತ್ತಾರೆ. ಆದರೆ ಈವರೆಗೂ ಯಾವುದೇ ರೀತಿಯ ಅನುದಾನಗಳು ಬಂದಿಲ್ಲ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕುಡಿವ ನೀರಿನ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದ ಅರೋಪಿಸಿದರು. ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಈಗಾಗಲೇ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇರುವತಂಹ ಬೋರ್ವೆಲ್ಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಚುನಾವಣೆಗೂ ಮುನ್ನವೇ ಸರ್ಕಾರ ಹಣವನ್ನು ನೀಡಬೇಕು ಎಂದರು.ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಬರ ಪಟ್ಟಿಗೆ ಆಲೂರು ಮತ್ತು ಸಕಲೇಶಪುರ ಸೇರಿಲ್ಲ. ಆದರೆ ಇಲ್ಲಿಯೂ ಸಹ ನೀರಿನ ಸಮಸ್ಯೆ ಉಂಟಾಗಿದೆ ಎಂದರು.
ಜಿಲ್ಲಾಧಿಕಾರಿ ಅಧ್ಯಕ್ಷ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.