ಪ್ರೊ. ನಂಜುಂಡಸ್ವಾಮಿ ಸವಿ ನೆನಪು ಕಾರ್ಯಕ್ರಮ
ಬೇಲೂರು: ರೈತರ ಮೇಲಿನ ಶೋಷಣೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ರೈತ ಚಳುವಳಿ ಇದ್ದೇ ಇರುತ್ತದೆ. ಆದ್ದರಿಂದ ರೈತರು ಸಂಘಟಿತರಾಗಿ ಹೋರಾಡಬೇಕೆಂದು ಪ್ರೊ. ನಂಜುಂಡಸ್ವಾಮಿ ಅವರ ಪುತ್ರ ಹಸಿರುಸೇನೆ ನೇತಾರ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.
ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ಸಂಯುಕ್ತವಾಗಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರೊ. ಎಂ.ಡಿ. ನಂಜುಂಡ ಸ್ವಾಮಿ ಅವರ 78ನೇ ಜಯಂತಿ ಹಾಗೂ 10ನೇ ಗೌರವ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 3 ವರ್ಷದಿಂದ ಬೇಲೂರಿಗೆ ನನ್ನನ್ನು ರೈತಸಂಘದವರು ಆಹ್ವಾನಿಸುತ್ತಿದ್ದರು. ಆದರೆ ಅಂದು ರೈತ ಸಂಘದೊಳಗೆ ಕೆಲವು ಸ್ವಾರ್ಥಿಗಳು ಇದ್ದುದರಿಂದ ಬರಲು ಹಿಂಜರಿಕೆ ಮಾಡಿದೆ. ಇಂದು ಎಲ್ಲವೂ ಪರಿಪೂರ್ಣ ಸ್ವಚ್ಛವಾಗಿರುವುದರಿಂದ ಆಗಮಿಸಿದ್ದೇನೆ. ಹಾಸನ ಜಿಲ್ಲೆಯಲ್ಲಿ ಬೃಹತ್ ರೈತಸಂಘದ ಕಾರ್ಯಕ್ರಮಮೊಂದನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಅವರ ಸೇವೆಗೆ ಸಾವಿಲ್ಲ: ರೈತರ ಮೇಲಿನ ಶೋಷಣೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ರೈತ ಚಳುವಳಿ ಇದ್ದೇ ಇರುತ್ತದೆ ಹಾಗೂ ಪ್ರೊ. ನಂಜುಂಡ ಸ್ವಾಮಿ ಎಂದೆಂದಿಗೂ ಅಮರರಾಗಿದ್ದಾರೆ. ಅವರ ಸೇವೆಗೆ ಸಾವಿಲ್ಲ, ಅವರ ಆದರ್ಶಗಳು ಹಾಕಿಕೊಟ್ಟ ಮಾರ್ಗಗಳನ್ನು ಪಾಲಿಸಿದಾಗ ಅವರ ಜಯಂತಿ ಹಾಗೂ ಸ್ಮರಣೆಗೆ ನಿಜವಾದ ಅರ್ಥ ಬರುತ್ತದೆ. ಆದ್ದರಿಂದ ನಾವುಗಳು ಅವರಂತೆಯೇ ನಡೆದುಕೊಳ್ಳಬೇಕೆಂದು ತಿಳಿಸಿದರು.
ಬಸವಾನಂದ ಸ್ವಾಮೀಜಿ, ಸಹಾಯಕ ಸಬ್ಇನ್ಸ್ಸ್ಪೆಕ್ಟರ್ ರಾಜ ಶೇಖರ್, ಶಿಕ್ಷಕಿ ಜಿ.ಡಿ. ವಸಂತಕುಮಾರಿ, ಗುತ್ತಿಗೆಪೌರಕಾರ್ಮಿಕ ನಾಗರಾಜು, ಹಿರಿಯ ರೈತ ಹೋರಾಟಗಾರ ಲಕ್ಷ್ಮೀಪುರ ಚನ್ನೇಗೌಡ ಅವರನ್ನು ಸನ್ಮಾನಿ ಸಲಾಯಿತು.ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಪ್ರಮುಖರಾದ ಅರೇಹಳ್ಳಿ ರಾಜೇಗೌಡ, ಜಿಲ್ಲಾ ವಕ್ತಾರ ಕಂಠದೊಡ್ಡೇಗೌಡ ಮಾತನಾಡಿದರು. ತಾಲೂಕು ಅಧ್ಯಕ್ಷ ಪರಮೇಶ್ ಅಧ್ಯಕ್ಷತೆ ವಹಿಸಿದ್ದರು.