ಭವನ ಕಾಮಗಾರಿಗೆ ಒತ್ತಾಯದಿಂದ ಹಣ ವಸೂಲಿ
ಹೊಳೆನರಸೀಪುರ: ಪಟ್ಟಣದಲ್ಲಿನ ಶಿಕ್ಷಕರ ಭವನದ ಕಾಮಗಾರಿ ಪೂರ್ಮಗೊಳಿಸಲು ಇಲಾಖೆಯ ಮೇಲಧಿಕಾರಿಗಳು ಹಾಗೂ ಸಂಘದ ನಿರ್ದೇಶಕರ ಗಮನಕ್ಕೂ ತರದೆ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಿಂದ ವಂತಿಗೆ ನೀಡುವಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಹಾಗೂ ಕೆಲವರು ಒತ್ತಡ ಹಾಕಿ ಹಣ ವಸೂಲಿಗೆ ಮುಂದಾಗಿದ್ದಾರೆಂದು ಸಂಘದ ಕೆಲವು ನಿರ್ದೇಶಕರು ಆರೋಪಿಸಿದ್ದಾರೆ.
ಈ ಕುರಿತಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಡಿ.ಸಿ. ಮಹೇಶಪ್ಪ, ಬಿ. ಸೋಮಣ್ಣಯ್ಯ, ಶಿಕ್ಷಕರಾದ ಕೆ.ಟಿ. ರವಿಕುಮಾರ್, ಎಚ್.ಎನ್. ಭೋಗೇಶ್, ಶ್ರೀಧರ್ ಮೊದಲಾದ ಶಿಕ್ಷಕರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಏಕಪಕ್ಷೀಯ ನಿರ್ಧಾರ ಕೈಗೊಂಡು ತಾಲೂಕಿನಾದ್ಯಂತ ಶಿಕ್ಷಕರಿಂದ ಬಲವಂತವಾಗಿ ವಂತಿಗೆ ವಸೂಲು ಮಾಡಲು ನಿಂತಿದ್ದಾರೆಂದು ಪದಾಧಿಕಾರಿಗಳೇ ಆರೋಪಿಸಿದರು.
ನಿರ್ದೇಶಕರ ಗಮನಕ್ಕೂ ತರದೆ: ಶಿಕ್ಷಕರ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವ ಕುರಿತಂತೆ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಭೆ ಕರೆದು, ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ನಂತರ ನಿರ್ಧಾರವನ್ನು ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದರೂ, ಸಂಘದ ಎಲ್ಲ ನಿರ್ದೇಶಕರ ಗಮನಕ್ಕೂ ತರದೆ, ಅಧ್ಯಕ್ಷ ಎಚ್.ಕೆ. ಮಂಜುನಾಥ್ ತಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸದೆ, ಬೇರೆ ಶಾಲೆಗಳಿಗೆ ಶಾಲಾ ಅವಧಿಯಲ್ಲಿ ತೆರಳಿ ಶಿಕ್ಷಕರುಗಳ ಮೇಲೆ ಒತ್ತಡ ಹೇರಿ ಅವರ ವೇತನದಿಂದ ವಂತಿಗೆ ನೀಡುವಂತೆ ಬಲವಂತವಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆಂದು ಸಂಘದ ನಿರ್ದೇಶಕರಾದ ಬಿ. ಸೋಮಣ್ಣಯ್ಯ ದೂರಿದರು.
17 ಲಕ್ಷ ಅಂದಾಜು ಪಟ್ಟಿ: ಹಳೆಯ ಶಿಕ್ಷಕರ ಭವನದ ಕಟ್ಟಡವನ್ನು ಒಡೆದು ಹೊಸದಾದ ಶಿಕ್ಷಕರ ಭವನವನ್ನು ಕಟ್ಟಲು 2002 ರಲ್ಲಿ ಸುಮಾರು 17 ಲಕ್ಷ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು.
ನೂತನ ಶಿಕ್ಷಕರ ಭವನದ ಕಾಮಗಾರಿಗಾಗಿ ಅಂದು ತಾಲೂಕಿನ 800 ಶಿಕ್ಷಕರು ತಲಾ 500 ಗಳಂತೆ 4 ಲಕ್ಷ ದಿ.ಜಿ. ಪುಟ್ಟಸ್ವಾಮಿಗೌಡ ಅವರು 2 ಲಕ್ಷ ಎಚ್.ಕೆ. ಜವರೇಗೌಡ ಅವರಿಂದ 2 ಲಕ್ಷ ಹಾಗೂ ಭವನದ ಆದಾಯದಲ್ಲಿ ಉಳಿತಾಯ ಮಾಡಲಾಗಿದ್ದ 1.70 ಲಕ್ಷ ಸೇರಿ ಸುಮಾರು 9.70 ಲಕ್ಷ.ಗಳಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆನಂತರದಲ್ಲಿ ಶಿಕ್ಷಕರ ಭವನದ ಖರ್ಚು- ವೆಚ್ಚಗಳ ಕುರಿತಂತೆ ಅಂದಿನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯು ಆಡಿಟ್ ವರದಿಯನ್ನು ನೀಡಿತ್ತು ಎಂದು ಮಹೇಶಪ್ಪ ತಿಳಿಸಿದರು.
ಆಡಿಟ್ ವರದಿ ನೀಡಿಲ್ಲ: ಆದರೆ 2004ರ ನಂತರ ಶಿಕ್ಷಕರ ಭವನದ ನಿರ್ಮಾಣಕ್ಕೆ ಕುರಿತಾದ ಖರ್ಚು- ವೆಚ್ಚಗಳು, ವಸೂಲಾದ ಹಣ, ಮಂಜೂರಾದ ಅನುದಾನ ಇವುಗಳ ಬಗ್ಗೆ ಇದುವರೆಗೂ ಯಾವುದೇ ಆಡಿಟ್ ವರದಿಯನ್ನು ನೀಡಿರುವುದಿಲ್ಲ ಎಂದು ಆರೋಪಿಸಿದ ತಾಲೂಕು ಸಂಘದ ನಿರ್ದೇಶಕ ಮಹೇಶಪ್ಪ, ನಂತರದಲ್ಲಿ ಸಂಸದರಾದ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ. ರೇವಣ್ಣ ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರ ನಿಧಿಯಿಂದ ತಲಾ 5 ಲಕ್ಷ ಹಾಗೂ 2009 ರಿಂದೀಚೆಗೆ ತಾಲೂಕಿನ ಪ್ರತಿ ಶಿಕ್ಷಕರಿಂದಲೂ ಕನಿಷ್ಠ 1ಸಾವಿರದಂತೆ ಸುಮಾರು 8-10 ಲಕ್ಷ ವಸೂಲು ಮಾಡಲಾಗಿದೆ ಎಂದು ವಿವರ ನೀಡಿದರು.