ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ
ಅರಕಲಗೂಡು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವರ್ಗ ಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 9 ಗಂಟೆಯಿಂದ ಆಸ್ಪತ್ರೆ ಎದುರು ಜಮಾಯಿಸಿದ ಆಸ್ಪತ್ರೆ ವೈದ್ಯರು,ಸ್ಟಾಫ್ ನರ್ಸ್ ಮತ್ತು ಇತರೆ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಮೇಲೆ ಆಗಿಂದಾಗ್ಗೆ ಕೆಲವು ದುಷ್ಕರ್ಮಿಗಳಿಂದ ಹಲ್ಲೆ ನಡೆಯುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಇಲ್ಲಿ ಕೆಲಸ ಮಾಡುವವರಿಗೆ ಯಾವುದೇ ರಕ್ಷಣೆ ಇಲ್ಲ. ಸದಾ ಆತಂಕದಲ್ಲಿ ಇರಬೇಕಾದ ವಾತಾವರಣ ಇದ್ದು, ಕರ್ತವ್ಯ ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಆರೋಪಿಸಿದರು.
ಕಳೆದ ಸೆ.22ರಂದು ಕರ್ತವ್ಯ ನಿರ್ವಹಣೆಯಲ್ಲಿದ್ದ ವೈದ್ಯ ಡಾ.ಧರಣೇಶ್ ಎಂಬುವರು ತುರ್ತು ಹೆರಿಗೆ ಕಾರ್ಯ ನಿರ್ವಹಿಸಿ ಅಪಘಾತ ನಿಮಿತ್ತ ಚಿಕೆತ್ಸೆಗೆಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಾಗ ದಿನೇಶ, ಶಿವ ಮತ್ತು ಇನ್ನೊಬ್ಬ ವ್ಯಕ್ತಿ ಡಾ.ಧರಣೇಶ್ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯದಿಂದ ನಿಂದಿಸಿದ್ದರು.ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಇದರಲ್ಲಿ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದು, ಮತ್ತೊಬ್ಬ ಆರೋಪಿ ದಿನೇಶ್ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರನೇ ಆರೋಪಿ ತಲೆ ಮರೆಸಿಕೊಂಡಿರುತ್ತಾನೆ. ಈ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸುವ ಸಂಬಂಧ ಆಸ್ಪತ್ರೆ ಆವರಣದಲ್ಲಿ ಒಂದು ಪೊಲೀಸ್ ಉಪ ಠಾಣೆಆರಂಭಿಸುವಂತೆ ಒತ್ತಾಯಿಸಿದ್ದಾರೆ.
ಡಾ.ಸ್ವಾಮಿಗೌಡ, ಡಾ.ರೇವಣ್ಣ, ಡಾ.ಧರಣೇಶ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬೆಂಬಲ: ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ವೈದ್ಯ ಸಿಬ್ಬಂದಿ ನಡೆಸಿದ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದೆ.