ಎತ್ತಿನಹೊಳೆಗೆ ತೀವ್ರ ಖಂಡನೆ
ಹಾಸನ: ರಾಜ್ಯ ಸರ್ಕಾರವು ಕರ್ನಾಟಕ ನೀರಾವರಿ ನಿಗಮ ಮೂಲಕ ಜಾರಿಗೊಳಿಸಲು ಹೊರಟಿರುವ ಎತ್ತಿನ ಹೊಳೆ ತಿರುವು ಯೋಜನೆಗೆ ಮಾ.3ರಂದು ಶಂಕುಸ್ಥಾಪನೆ ಮಾಡುತ್ತಿರುವ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ನಾನಾ ಸಂಘಟನೆಗಳ ಪ್ರಮುಖರು, ಸಾಹಿತಿಗಳು, ಪರಿಸರವಾದಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಅಲ್ಲದೆ ಇದೊಂದು ಕರಾಳದಿನವಾಗಿದ್ದು, ಅಂದು 'ನೇತ್ರಾವತಿ ರಕ್ಷಿಸಿ' ಘೋಷಣೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂದ್ಗೆ ಅಲ್ಲಿಯ ಸಂಘ ಸಂಸ್ಥೆಗಳು ಕರೆಕೊಟ್ಟಿವೆ. ಬಯಲು ಸೀಮೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಂತರ, ಬೆಂಗಳೂರು ನಗರ ಮುಂತಾದ ಕಡೆಗೆ ನೀರು ಕೊಡಲು ಉದ್ದೇಶಿಸಿರುವ ಈ ಯೋಜನೆ ಅವೈಜ್ಞಾನಿಕವಾದುದು ಎಂದು ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಎ. ಕಿಶೋರ್ಕುಮಾರ್, ಸಾಹಿತಿ ರೂಪ ಹಾಸನ, ಪರಿಸರವಾದಿ ಚ.ನ. ಅಶೋಕ್, ಬಿಸಿಆರ್ಟಿ ಸಂಸ್ಥೆ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ ಮತ್ತಿತರರು ತಿಳಿಸಿದ್ದಾರೆ.