ಜಾತಿ ತಾರತಮ್ಯ ವಿರುದ್ಧ ಹೋರಾಟ ಅಗತ್ಯ
ಹಾಸನ: ರಾಜ್ಯದಲ್ಲಿ ಸುಮಾರು 157 ರೀತಿಯ ಜಾತಿ ತಾರತಮ್ಯ ಪ್ರಕಾರಗಳು ನಡೆಯುತ್ತಿವೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸ್ವಾಭಿಮಾನಿ ಭವನದಲ್ಲಿ ಭಾನುವಾರ ಸಹಮತ ವೇದಿಕೆ ವತಿಯಿಂದ ನಡೆದ 'ತಳ ಸಮುದಾಯಗಳ ಪ್ರತಿರೋಧದ ನೆಲೆಗಳು' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಾತಿ ತಾರತಮ್ಯ ವಿರುದ್ಧ ತಳಸಮುದಾಯ
ಒಂದಾಗಿ ಹೋರಾಡಬೇಕು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ನೂರೈವತ್ತಕ್ಕೂ ಹೆಚ್ಚಿನ ಪ್ರಕಾರದ ಜಾತಿ ತಾರಮತ್ಯ ನಡೆಯುತ್ತಿದೆ. ಅದನ್ನು ಪ್ರಶ್ನಿಸುವ ಜಾತ್ಯತೀತ ಶಕ್ತಿ ಜಾತಿವಾದಿಗಳು ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ದಿನೇ ದಿನೇ ಸಾಮಾಜಿಕ ಬಹಿಷ್ಕಾರ ಪ್ರಕರಣ ಹೆಚ್ಚಾಗುತ್ತಿದ್ದು, ಕಾನೂನಿನ ಹಿಡಿತಕ್ಕೆ ಸಿಗದ ರೀತಿಯಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗುತ್ತಿದೆ.
ಇದರ ವಿರುದ್ಧವಾದ ಕಾನೂನುಗಳಿದ್ದರೂ, ಅವು ದಲಿತರ ಪರವಾಗಿ ಜಾರಿಯಾಗುತ್ತಿಲ್ಲ. ಆದ್ದರಿಂದ ತಳ ಸಮುದಾಯ ಒಟ್ಟಾದರೆ ಮಾತ್ರ ಪ್ರತಿರೋಧ ಒಡ್ಡಲು ಸಾಧ್ಯ ಎಂದರು.
ಶ್ರೀಮಂತರಿಗೆ ಮಾತ್ರ ಲಾಭ: ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಮತ್ತು ಬಡವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಬಡವರ ಮೇಲಿನ ಸುಲಿಗೆ ಹೆಚ್ಚುತ್ತಿದ್ದು, ಶೇ.10 ರಿಂದ 15ರಷ್ಟು ಶ್ರೀಮಂತರಿಗೆ ಮಾತ್ರ ಅದರ ಲಾಭ ದೊರಕುತ್ತಿದೆ.
ರೈತ ಬೆಳೆದ ಕೃಷಿ ಉತ್ಪನ್ನ ಮತ್ತು ಗುಡಿ ಕೈಗಾರಿಕೆಯಲ್ಲಿ ಉತ್ಪಾದಿಸಲಾಗುವ ವಸ್ತುಗಳು ವಿದೇಶಗಳಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಬಹು ರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ವಸ್ತುಗಳನ್ನು ಬಡವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಹಾಗಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಬಡವರ ಸುಲಿಗೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ಹೇಳಿದರು.
ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಸರ್ಕಾರಿ ಕೆಲಸಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದಾಗಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
ಅದರ ಜೊತೆಯಲ್ಲೇ ಮೀಸಲಾತಿ ವ್ಯವಸ್ಥೆ ಮಟ್ಟ ಹಾಕುವ ಸಂಚು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ ಎಂದ ಅವರು, ದೇಶದ ಶೇ.40ರಷ್ಟು ಭಾಗ ಭೂಮಿ ಕೇವಲ ಶೇ.5ರಷ್ಟು ಶ್ರೀಮಂತರ ಕೈಯಲ್ಲಿದೆ.
ಉಳ್ಳವರು ಮನೆಯಲ್ಲಿ ಜೀತ ಮಾಡಬೇಕಾಗಿದೆ. ಭೂ ರಹಿತರು ಪಟ್ಟಣ ಸೇರಿದರೆ ಜೀವನ ಮಟ್ಟ ಸುಧಾರಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಹಳ್ಳಿ ಬಿಟ್ಟು ಪಟ್ಟಣ ಸೇರುವ ಭೂರಹಿತರು ಹೊಸ ರೀತಿಯ ಜೀತಕ್ಕೆ ಸೇರಿಕೊಂಡು ಗುಲಾಮರಾಗಿ ದುಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿವಿಎಸ್ ಮುಖಂಡ ಎಂ.ಎಸ್. ಯೋಗೀಶ್, ಉಪನ್ಯಾಸಕಿ ಕೆ.ಎಸ್.ಪ್ರಮೀಳಾ, ಗಂಗೂರು ಭಾಗಮ್ಯ ಮತ್ತಿತರರು ಇದ್ದರು.