ಜಾನಪದ ಉಳಿವಿಗೆ ಜನ ಜಾಗೃತಿ ಅಗತ್ಯ
ಅರಕಲಗೂಡು: ಜಾನಪದ ದೇಶ ಸಂಸ್ಕೃತಿಯ ಮೂಲ ಬೇರು. ಆದರೆ ಆಧುನಿಕ ಜೀವನದತ್ತ ನಮ್ಮ ಯುವ ಸಮಾಜ ಮುಖ ಮಾಡಿರುವುದರಿಂದ ಜನಪದ ನಲುಗಿ ಹೋಗುತ್ತಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಅವಶ್ಯಕತೆಗಳಿಗನುಗುಣವಾಗಿ ಜಾಗತೀಕರಣ ಆಯ್ದುಕೊಳ್ಳುವ ಬಗೆಗೆ ಆಕ್ಷೇಪಣೆಗಳು ಇಲ್ಲದಿದ್ದರೂ ಅದು ಮಾನವನ ಜೀವನ ಶೈಲಿಯನ್ನೇ ಬದಲಿಸುತ್ತಿರುವುದು ನಿಜಕ್ಕೂ ಆತಂಕಕಾರಿ.
ಅದು ಒಂದು ರೀತಿಯಲ್ಲಿ ದೇಶದ ಜೀವನ ಶೈಲಿಗೆ ಧಕ್ಕೆ ಆಗದಂತೆ ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಅಂದು ಶಿಕ್ಷಣ ಮರೀಚಿಕೆ ಎನ್ನುವಂತಾಗಿದ್ದ ಕಾಲದಲ್ಲಿ ಜಾನಪದ ವಿಸ್ತಾರವಾಗಿ ಮನೆ-ಮನೆಗಳಲ್ಲೂ ಆವರಿಸಿತ್ತು ಎಂದು ನೆನಪು ಮಾಡಿಕೊಟ್ಟರು.
ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ದೇಶದ ಸಾಂಸ್ಕೃತಿಕ ನೆಲೆ ಉಳಿಯಬೇಕಾದರೆ ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿಯ ಬೇರುಗಳನ್ನು ರಕ್ಷಿಸಿದರೆ ಮಾತ್ರ ಜಾನಪದ ಕಲೆ ಉಳಿದು ಎಚ್.ಎಲ್.ನಾಗೇಗೌಡರ ಮೂಲ ಉದ್ದೇಶ ಈಡೇರಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಮಂಜು ಮಾತನಾಡಿ, ಕಲೆ ಎಲ್ಲರಿಗೂ ಒಲಿಯವುದಿಲ್ಲ. ಅದೇ ರೀತಿ ಕಲೆಯನ್ನು ಪ್ರೋತ್ಸಾಹಿಸಿದಾಗ ಮಾತ್ರ ಜಾನಪದ ಕ್ಷೇತ್ರದ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಾನಪದ ಮೇಳಕ್ಕೆ ಸಹಕಾರ: ರಾಜ್ಯ ಮಟ್ಟದ ಜಾನಪದ ಮೇಳವನ್ನು ತಾಲೂಕಿನಲ್ಲಿ ಆಯೋಜಿಸುವುದಾದರೆ ತಾವು ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದರು.
ಇದೇ ವೇಳೆ ಚಿತ್ರ ಕಲಾವಿದ ಜೋಸೆಫ್, ಕೀಲು ಕುದುರೆ ಕಲಾವಿದ ಹೆಚ್.ಎನ್.ರಾಮಯ್ಯ, ಕಲಾ ಶಿಕ್ಷಕ ಕೆ.ಗಂಗಾಧರಯ್ಯ, ಜಾನಪದ ಕಲಾವಿದ ದೇವಾನಂದ ವರಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ, ಜಿಪಂ ಮಾಜಿ ಸದಸ್ಯ ಜಿ.ಟಿ.ಪುನೀತ್, ಮಂಜಪ್ಪಗೌಡ, ಪಪಂ ಸದಸ್ಯರಾದ ನಿರಂಜನ, ಮಂಜುನಾಥ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವ ಜಾಗರಣೆ
ಜಾವಗಲ್:ಪೇಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಿವಜಾಗರಣೆ ಆಚರಿಸಲಾಯಿತು.ಜಾವಗಲ್ ಪೊಲೀಸ್ ಠಾಣಾಧಿಕಾರಿ ಸಿ.ಪಿ.ನವೀನ್ ಮಾತನಾಡಿ, ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಯುವಕರು ಧಾರ್ಮಿಕ ಭಾವನೆ ಬೆಳೆಸಿಕೊಂಡು ನಮ್ಮ ಸಂಸ್ಕೃತಿ ಬೆಳೆಸಿ, ಉಳಿಸುವ ಜವಾಬ್ದಾರಿ ವಹಿಸಬೇಕೆಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಮಂಜುನಾಥ ಉದ್ಘಾಟಿಸಿದರು. ಬಸವೇಶ್ವರ ಸ್ವಾಮಿ ದೇಗುಲದ ಅರ್ಚಕ ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ ರಮೇಶ, ದೇವಾಂಗ ಸಮಾಜದ ಅಧ್ಯಕ್ಷ ಶಿವಶಂಕರ್ ಮತ್ತಿತರರು ಮಾತನಾಡಿದರು.
ಪೇಟೆ ಬೀದಿ ರಾಮಮಂದಿರದ ಅರ್ಚಕರಾಗಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕ ಸೀತಾರಾಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸುಕೃತ ಮತ್ತು ಸಂಗಡಿಗರಿಂದ ಭರತನಾಟ್ಯ, ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಸಲಾಯಿತು. ಕೋಟೆ ಬೀದಿ ಕರಿಯಮ್ಮ ದೇವಾಲಯದ ಸಮೀಪ ಪುಟಾಣ ಮಕ್ಕಳಿಗೆ ಕ್ರಿಕೆಟ್, ಟಾಸ್ಬಾಲ್, ಮ್ಯೂಸಿಕಲ್ ಛೇರ್ ಮತ್ತಿತರೆ ಸ್ಪರ್ಧೆಗಳನ್ನು, ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.