'ದಾಸೋಹ ಸಿಬ್ಬಂದಿಗೆ ಭದ್ರತೆ ನೀಡಿ'
ಚನ್ನರಾಯಪಟ್ಟಣ: ಅಕ್ಷರ ದಾಸೋಹ ಕಾರ್ಯಕರ್ತರು ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸೇವಾ ಭದ್ರತೆ ಹಾಗೂ ಮೂಲ ಸೌಲಭ್ಯಗಳ ಅಗತ್ಯವಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ತಾಲೂಕು ಮಟ್ಟದ ಅಕ್ಷರ ದಾಸೋಹ ಕಾರ್ಯಕರ್ತೆಯರ ಸಮಾವೇಶದಲ್ಲಿ ಮಾತನಾಡಿ, ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಸರ್ಕಾರ ಸೇವಾ ಭದ್ರತೆ ನೀಡಿ ಕನಿಷ್ಠ ಕೂಲಿ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಮೇಲಿಂದ ಮೇಲೆ ಕೆಲವು ಒತ್ತಡಗಳನ್ನು ನೀಡುತ್ತಾ ಬಂದಿದ್ದು, ದಾಸೋಹದ ಜತೆಗೆ ಹಾಲು ವಿತರಣೆಯ ಜವಬ್ದಾರಿ ನೀಡಿದೆ. ಆದರೆ ಮಕ್ಕಳಿಗೆ ಹೊಟ್ಟೆ ತುಂಬಿಸುವ ತಮ್ಮ ಹೊಟ್ಟೆ ಖಾಲಿ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಅರವಿಂದ ಮಾತನಾಡಿ, ಅಕ್ಷರ ದಾಸೋಹ ಕಾರ್ಯಕರ್ತರು ಎಸ್‌ಡಿಎಂಸಿ ಹಾಗೂ ಕೆಲ ಶಿಕ್ಷಕರ ಕಿರುಕುಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೇವಾ ಖಾತ್ರಿ ಅಗತ್ಯವಿದೆ ಎಂದು ತಿಳಿಸಿದರು.
ದಾಸೋಹ ಕಾರ್ಯಕರ್ತರು ಬೆಳೆಗ್ಗೆಯಿಂದ ಸಂಜೆವರಗೆ ಶಾಲೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಅವರಿಗೆ ಕನಿಷ್ಠ ರು.10 ಸಾವಿರ ತಿಂಗಳಿಗೆ ನೀಡಬೇಕೆಂದು ಒತ್ತಾಯಿಸಿದರು.
ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲು ಮುಂದಾದರೆ ಕಾರ್ಮಿಕರ ಮೇಲೆ ಎಸ್ಮಾ ಕಾಯಿದೆ ಏರುವ ನಿಟ್ಟಿನಲ್ಲಿ ಸರ್ಕಾರ ತಿಳಿಸಿದೆ. ಮಾ.8ರಿಂದ ತಾವು ಹೋರಾಟಕ್ಕಿಳಿಯುವುದು ಖಚಿತ ಎಂದರು.