ನವ ಗ್ರಾಮಗಳಿಗೆ ಕುಡಿವ ನೀರು ಯೋಜನೆ
ಹೊಳೆನರಸೀಪುರ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ವಾಗ್ದಾನದಂತೆ ತಾಲೂಕಿನ ಕಸಬಾ ಹಾಗೂ ಹಳ್ಳಿಮೈಸೂರು ಹೋಬಳಿಯ ಗ್ರಾಮಗಳಿಗೆ ರು.10.75 ಕೋಟಿ ವೆಚ್ಚದಲ್ಲಿ ಹೇಮಾವತಿ ನದಿಯಿಂದ ನೀರು ಕೊಡುವ ಯೋಜನೆಗೆ ಚಾಲನೆ ನೀಡಿದ್ದೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ಇಲ್ಲಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಚಿಟ್ಟನಹಳ್ಳಿ ಗ್ರಾಮದ ಬಳಿಯಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಕಸಬಾ ಹೋಬಳಿಯ 9 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ ಜಾರಿಗೆ ತರಲಾಗಿತ್ತಾದರೂ, ಂತರದಲ್ಲಿ ಬಂದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಮೂಲೆಗುಂಪು ಮಾಡಿತ್ತು, ನಂತರದಲ್ಲಿ ತಾವು ಪ್ರಯತ್ನಪಟ್ಟು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದಾಗಿ ತಿಳಿಸಿದರು.
ಯೋಜನೆ ಪೂರ್ಣಗೊಳಿಸಲಾಗುವುದು: ಬಹು ಗ್ರಾಮಗಳಿಗೆ ಕುಡಿವ ನೀರು ಕೊಡುವ ಯೋಜನೆಯಡಿಯಲ್ಲಿ ಸುಮಾರು ರು.10.75 ಕೋಟಿ ವೆಚ್ಚದಲ್ಲಿ ಕಸಬಾ ಹೋಬಳಿಯಲ್ಲಿನ 9ಗ್ರಾಮಗಳು ಹಾಗೂ ಹಳ್ಳಿಮೈಸೂರು ಹೋಬಳಿಯಲ್ಲಿನ 8 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ನೀಡಲಾಗಿದ್ದು, 11ತಿಂಗಳಲ್ಲಿ ನದಿಯಿಂದ 17 ಹಳ್ಳಿಗಳಿಗೆ ಕುಡಿಯುವ ನೀರು ನೀಡುವ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಈ ಯೋಜನೆಯಡಿಯಲ್ಲಿ ಕಸಬಾ ಹೋಬಳಿಯಲ್ಲಿನ ಪಡುವಲಹಿಪ್ಪೆ, ಯಳ್ಳೇಶಪುರ, ಬಾಗೀವಾಳು, ಮೂಡಲಹಿಪ್ಪೆ, ವಳಂಬಿಗೆ ಮೊದಲಾದ ಗ್ರಾಮಗಳಿಗೆ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದ ಅವರು, ಕೆಲವೇ ದಿನಗಳಲ್ಲಿ ಪಟ್ಟಣದ ತಾಲೂಕು ಕ:ಕೇರಿಯ ಬಳಿಯಿಂದ, ಅರಕಲಗೂಡು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 90ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದ ಅವರು ಹೇಳಿದರು. ತಾಪಂ ಅಧ್ಯಕ್ಷೆ ಕುಸುಮ ಸಣ್ಣಸ್ವಾಮಿ, ಜಿಪಂ ಇಇ ನಾಗರಾಜ್, ಜಿಪಂ ಸದಸ್ಯರಾದ ಮಂಜುಳಾಬೈರಾಜ್, ಯಶೋಧಮ್ಮ ಕೃಷ್ಣೇಗೌಡ, ತಾಪಂ ಸದಸ್ಯ ಎಚ್.ಬಿ.ನಂಜುಂಡಪ್ಪ, ಜಿಪಂ ಎಇಇ ಸತೀಶ್ಬಾಬು, ಎಇ ಪ್ರಭು, ಪ್ರಶಾಂತ್, ತಾಪಂ ಇಒ ತಮ್ಮಣ್ಣಗೌಡ ಹಾಗೂ ಗ್ರಾಪಂ ಅಧ್ಯಕ್ಷೆ ಜಯಮ್ಮ ಉಪಸ್ಥಿತರಿದ್ದರು.