ಸ್ಮಾರ್ಟ್ ಕ್ಲಾಸ್ ಪರಿಕರ ವಿತರಣೆ
ಹೊಳೆನರಸೀಪುರ: ತಾಲೂಕಿನ ಜೋಡಿಗುಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳು ನೀಡಿರುವ ಸ್ಮಾರ್ಟ್ ಕ್ಲಾಸ್ ಪರಿಕರಗಳ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಸಂಪನ್ಮೂಲ ಸಂಯೋಜನಾಧಿಕಾರಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಜಗತ್ತು ತುಂಬಾ ವೇಗವಾಗಿ ಬೆಳೆಯುತ್ತಿದ್ದು, ನಾವೂ ಕೂಡ ಜ್ಞಾನ ಬೆಳೆಸಿಕೊಂಡು ಬೆಳೆಯಬೇಕಾಗಿದೆ. ಅಂತರ್ಜಾಲ ಪ್ರಭಾವದಿಂದ ಘಟನೆಗಳು ಘಟಿಸಿದ ಕೆಲವೇ ನಿಮಿಷಗಳಲ್ಲಿ ಇಡೀ ಪ್ರಪಂಚಕ್ಕೆ ವಿಷಯ ತಿಳಿಯುತ್ತಿದೆ ಎಂದರು.
ವಿಪ್ರ ಸಂಘದ ಪದಾಧಿಕಾರಿ ಬಾಲಸುಬ್ರಹ್ಮಣ್ಯ ಮಾತನಾಡಿ, ಒಂದುವರೆ ಗಂಟೆಗಳ ಕಾಲ ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸ ಸಂಬಂಧಿಸಿದ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಸಲಹೆ ಸ್ವೀಕರಿಸಿ ಉತ್ತಮ ವ್ಯಾಸಂಗ ಮಾಡಿ ಜೀವನದಲ್ಲಿ ಮುಂದೆ ಬರುವಂತೆ ಕರೆ ನೀಡಿದರು. ಪ್ರಾಚಾರ್ಯ ಶ್ರೀನಿವಾಸ್, ಎಸ್ಡಿಎಂಸಿ ಸದಸ್ಯ ಕುಮಾರ್ ಇದ್ದರು.