ಹತ್ತಳ್ಳಿ ಗ್ರಾಮಸ್ಥರಿಂದ ವರುಣನಿಗಾಗಿ ಪೂಜೆ
ಅರಸೀಕೆರೆ: ಕಳೆದ ಕೆಲ ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿ ಅಂತರ್ಜಲ ಮಟ್ಟ ಕುಸಿತದಿಂದ ತೆಂಗಿನ ಬೆಳೆ ನಾಶದ ಹಂಚಿಗೆ ಬಂದು ಹಾಕಿದ ಬೆಳೆಗಳು ತೇವಾಂಶ ಕೊರತೆಯಿಂದ ನಾಶವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮಳೆ ಸುರಿಸಿ ತಾಲೂಕಿನ ರೈತ ಸಮುದಾಯದ ಕಷ್ಟ ನಿವಾರಿಸುವಂತೆ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರಲ್ಲಿ ಹರಕೆ ಮಾಡಿಕೊಂಡು ಸುತ್ತಮುತ್ತಲ ಗ್ರಾಮಗಳ ಭಕ್ತರು ಮೊರೆ ಹೋಗಿದ್ದಾರೆ.
ಸುತ್ತಮುತ್ತಲ ಗ್ರಾಮಸ್ಥರು ಬೆಳಗ್ಗಿನಿಂದಲೇ ಸ್ವಾಮಿಯವರಿಗೆ ಅಭಿಷೇಕ, ಕುಂಭಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ನೂರಾರು ಮಹಿಳೆಯರು ಕಳಸಗಳನ್ನೊತ್ತು ಭಕ್ತಿ ಭಾವದಿಂದ ದೇವರಲ್ಲಿ ಮೊರೆಯಿಟ್ಟರು. ಜವನಹಳ್ಳಿ, ಯಾದಾಪುರ, ಮುರುಂಡಿ, ಮುದ್ದರಂಗನಹಳ್ಳಿ, ಮಲ್ಲೇನಹಳ್ಳಿ, ಸಂಕೋಡ್ನಳ್ಳಿ, ಗೊಲ್ಲರಹಳ್ಳಿ, ಕಾಟಿಕೆರೆ, ಸೇರಿದಂತೆ ಹತ್ತಾರು ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.