ವಾರ್ಷಿಕೋತ್ಸವದೊಂದಿಗೆ ಶಿವರಾತ್ರಿ ಆಚರಣೆ
ಹಾಸನ: ನಗರದ ತಣ್ಣೀರುಹಳ್ಳದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಆವರಣದಲ್ಲಿ ಶಿವರಾತ್ರಿಯ ಆಚರಣೆಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.
ಅಂದು ಬೆಳಗ್ಗೆ 5ರಿಂದ ಧನ್ವಂತರಿ ಹೋಮವನ್ನು ನಡೆಸಿ, ಶಿಷ್ಯೋಪನಯನ ಸಂಸ್ಕಾರ ವಿಧಿ ಅನುಸಾರವಾಗಿ ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಂತರ ಬೆಳಗ್ಗೆ 8ರಿಂದ ಮಾರನೆ ದಿನ ಬೆಳಗ್ಗೆ 8ರ ವರೆಗೆ ಹಳ್ಳದ ಶ್ರೀ ರಾಮೇಶ್ವರ ದೇವರಿಗೆ ನಿರಂತರ ಅಭಿಷೇಕ, ಪೂಜೆ, ಅರ್ಚನೆ, ಮಂಗಳಾರತಿ, ಪ್ರಸಾದ ವಿತರಣೆ ಜರುಗಿತ್ತು. ಈ 24 ಗಂಟೆಗಳ ಸಮಯದಲ್ಲಿ ಸುಮಾರು 10000ಕ್ಕೂ ಹೆಚ್ಚು ಜನ ಶ್ರೀ ರಾಮೇಶ್ವರ ದರ್ಶನ ಪಡೆದರು.
ಪ್ರಶಸ್ತಿ ವಿತರಣೆ: ಸಂಜೆ 6ರಿಂದ ಮಾರನೆ ದಿನ ಬೆಳಗ್ಗೆ 6ರವರೆಗೆ ಕಾಲೇಜಿನ ವಾರ್ಷಿಕೋತ್ಸವ ತರಂಗ-2014 ನಡೆಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ, ಪರೀಕ್ಷೆ, ಕಲೆ ಸಾಂಸ್ಕತಿಕ ಹಾಗೂ ಸೇವಾವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿ ಮತ್ತು ಸಿಬ್ಬಂದಿಯವರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಗುರು ವಂದನೆಯನ್ನು ಸ್ವೀಕರಿಸಿದ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಮುಖ್ಯಸ್ಥ ಡಾ. ಗಜಾನನ್ ಹೆಗಡೆ ಮಾತನಾಡಿ, ಎಸ್.ಡಿ.ಎಂ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು.
ಸ್ವಾತಿಮುತ್ತು: ಅಶ್ವಿನಿ-2013 ಪ್ರಶಸ್ತಿ ಸ್ವೀಕರಿಸಿದ ಮೂಡುಬಿದ್ರೆಯ ಆಳ್ವಾಸ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ವಿನಯ್ ಚಂದ್ರಶೆಟ್ಟಿ ಮಾತನಾಡಿ, ಎಸ್‌ಡಿಎಂ ಕಾಲೇಜಿನಲ್ಲಿ ಓದಲು ಅವಕಾಶ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಕಪ್ಪೆಚಿಪ್ಪಿನಲ್ಲಿ ಇರುವ ಸ್ವಾತಿಮುತ್ತು ಎಂದು ಬಣ್ಣಿಸಿದರು.
ಯಶಸ್ಸಿಗೆ ಕಾರಣ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿ, ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಮತ್ತು ಆಸ್ಪತ್ರೆಯ ಪ್ರಗತಿಯ ಪಥ ಸಾಂಘಿಕ ಶ್ರಮ. ಡಾ. ಡಿ. ವೀರೇಂದ್ರ ಹೆಗ್ಗಡೆ, ಆಡಳಿತ ಮಂಡಳಿ, ಸೇವಾ ಮನೋಭಾವದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜಾಣ್ಮೆ ಇವು ನಿಸ್ಸಂಶಯವಾಗಿ ಯಶಸ್ಸಿಗೆ ಕಾರಣ ಎಂದರು.
ಧಾರ್ಮಿಕ ನೆಲೆಗಟ್ಟಿನ ಮನೋರಂಜನಾ ಕಾರ್ಯಕ್ರಮಗಳು ನಿರಂತರ 12 ತಾಸು ನಡೆದು ಸಾವಿರಾರು ಜನರನ್ನು ಮಂತ್ರ ಮುಗ್ಧಗೊಳಿಸಿದವು. ಆಯುರಶ್ಮಿ ಎಂಬ ಕಾಲೇಜಿನ ವಾರ್ಷಿಕ ಸಂಚಿಕೆ ಈ ಸಂದರ್ಭದಲ್ಲಿ ಬಿಡುಗಡೆ ಆಯಿತು.