ಸಂತೆಯಲ್ಲಿ ತೆರಿಗೆ ವಸೂಲಿ ರೈತರಿಂದ ತೀವ್ರ ವಿರೋಧ
ಬೇಲೂರು: ತಾಲ್ಲೂಕಿನ ಹನಿಕೆ ಸಂತೆಗೆ ಜಾನುವಾರುಗಳನ್ನು ಮಾರಾಟಕ್ಕೆ ತರುವ ರೈತರಿಂದ ಗ್ರಾಮ ಪಂಚಾಯ್ತಿಯವರು ಸುಂಕ ವಸೂಲು ಮಾಡುತ್ತಿದ್ದು, ಇನ್ನು ಮುಂದೆ ಯಾವುದೆ ಸುಂಕ ಪಡೆಯಬಾರದು, ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತಕ್ಷಣ ಕ್ರಮ ಕೂಗೊಳ್ಳಬೇಕು ಇಲ್ಲದಿದ್ದಲ್ಲಿ ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ಕರ್ನಾಟಕ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಭೋಗ ಮಲ್ಲೇಶ ನೇತೃತ್ವದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ಬಸವರಾಜು ಐಯಣ್ಣನವರ್‌ಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಂತೆ ನಡೆಯುವ ಬೇರೆ ಸ್ಥಳದಲ್ಲಿ ಜಾನುವಾರುಗಳಿಗೆ ರೈತರಿಂದ ಯಾವುದೇ ಸುಂಕ ಪಡೆಯುತ್ತಿಲ್ಲ, ಅದರೆ ತಾಲ್ಲೂಕಿನ ಹನಿಕೆ ಸಂತೆಗೆ ಸಂಬಂಧ ಪಟ್ಟ ಹನಿಕೆ ಗ್ರಾಮ ಪಂಚಾಯ್ತಿ ಅಡಳಿತ ಈ ಬಗ್ಗೆ ಹರಾಜು ಪ್ರಕ್ರಿಯೆ ನಡೆಸಿದ್ದು, ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಎಂದರು.
ಕ್ರಮಕೈಗೊಳ್ಳಬೇಕಿದೆ: ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂತತಿ ನಶಿಸಿ ಹೋಗುತ್ತಿದ್ದು, ಜಾನುವಾರುಗಳ ಸಂತತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ ಎಂದರು.
ಎಚ್ಚರಿಕೆ: ರೈತನ ಜೀವನಾಡಿಯಾದ ಜಾನುವಾರುಗಳ ಸಂತೆಗೆ ಅಗತ್ಯ ಮೂಲ ಸೌಲಭ್ಯವನ್ನು ನೀಡುವತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಹನಿಕೆ ಗ್ರಾಮ ಪಂಚಾಯ್ತಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ಜಾನುವಾರುಗಳನ್ನು ಕಚೇರಿಗೆ ಕಟ್ಟಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಅಂದಲೆ ಪರಮೇಶ್, ರಂಗನಾಥ್, ಪ್ರಕಾಶ್, ನಂಜಯ್ಯ, ಚಂದ್ರಶೇಖರ್, ರುದ್ರೇಶ್ ಇನ್ನು ಮುಂತಾದವರು ಹಾಜರಿದ್ದರು.