ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅವಸಾನದ ಅಂಚಿಗೆ ತಲುಪಿದ ತೂಗುಸೇತುವೆ

Vishwanath S
Updated On : 7 Mar 2014, 12:21 pm

ಹಾಸನ: ರಾಮನಾಥಪುರ ಹತ್ತಿರವಿರುವ ಕೊಣನೂರು ಕಟ್ಟೇಪುರ ಮಧ್ಯೆಯ ಇರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ತೂಗು ಸೇತುವೆ ನಿರ್ವಹಣೆ ಇಲ್ಲದೆ ಅವಸಾನದ ಅಂಚಿಗೆ ತಲಪಿದೆ.
ಜಿಲ್ಲಾ ಪಂಚಾಯಿತಿಗೆ ಒಳಪಡುವ ತೂಗು ಸೇತುವೆ ಕಾಮಗಾರಿಯನ್ನು 1999-2000ನೇ ಸಾಲಿನಲ್ಲಿ ಅಂದಾಜು ಸುಮಾರು ರು. 30 ಲಕ್ಷ ವೆಚ್ಚ  ಮಾಡಿ, 196 ಮೀ, ಉದ್ದ ಹಾಗೂ 1.20 ಮೀ, ಅಳತೆಯಲ್ಲಿ ತೂಗು ಸೇತುವೆ ನಿರ್ಮಿಸಲಾಗಿದೆ.
ಕೊಣನೂರು ಮತ್ತು ಕಟ್ಟೇಪುರ ನಡುವಿನ ಸಂಪರ್ಕಕ್ಕೆ ಕೇವಲ 1 ಕಿಮೀ ಇದೆ. ಅದರೆ ಬಸ್ ಈ ಗ್ರಾಮಕ್ಕೆ ಹೋಗಬೇಕಾದರೆ ರಾಮನಾಥಪುರ, ಮಲ್ಲಿರಾಜಪಟ್ಟಣದ ಮಾರ್ಗ 12 ಕಿಮೀ ದೂರ ಕಟ್ಟೇಪುರಕ್ಕೆ ಸುತ್ತಿ ಹೋಗಬೇಕಾಗುತ್ತದೆ. ತೂಗು ಸೇತುವೆಯಲ್ಲಿ ಪ್ರತಿನಿತ್ಯ ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಅದರೆ ನಿರ್ವಹಣೆ ಹೊತ್ತಿರುವ ಹೊತ್ತಿರುವ ಇಲಾಖೆ ಇದರ ಮುತುವರ್ಜಿ ವಹಿಸುವುದರಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.
ಗೇಟ್ ನಿರ್ಮಾಣ: ಈ ಸೇತುವೆ ಮಾಡಿರುವುದು ಸಾರ್ವಜನಿಕರು ತಿರುಗಾಡಲಿಕ್ಕೆ ಹಾಗೂ ಪ್ರವಾಸಿಗರು ನೋಡಲಿಕ್ಕೆ ಮಾಡಿರುವುದು, ಆದರೆ ಕೆಲವರು ಸೈಕಲ್ ಹಾಗೂ ಮೋಟಾರ್ ಬೈಕ್ ಸವಾರಿ ನಿರಂತರವಾಗಿ ನಡೆಯುತ್ತಿರುವುದರಿಂದ ಸೇತುವೆಗೆ ಧಕ್ಕೆ ಉಂಟಾಗಿದೆ. ಇದನ್ನು ಮನಗಂಡ ಜಿಲ್ಲಾ ಪಂಚಾಯತ್ ಸೇತುವೆಯ ಎರಡು ಕಡೆಯ ಪ್ರವೇಶದ್ವಾರದಲ್ಲಿ ಗೇಟ್ ನಿರ್ಮಿಸಿದೆ.
ಈ ಸೇತುವೆಯನ್ನು ನಿರ್ಮಾಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದಾಗಿನಿಂದಲೂ ತಡೆಗೋಡೆಯಾಗಿರುವ ಕಬ್ಬಿಣದ ತಂತಿಗಳು, ನೆಲಹಾಸಿಗೆ ಹಾಗೂ ವೈರುಗಳಿಗೆ ಬಣ್ಣ ಲೇಪಿಸದಿರುವುದರಿಂದ ಅವು ತುಕ್ಕು ಹಿಡಿಯುತ್ತಿವೆ. ಅಲ್ಲದೇ, ಒಂದೆರಡು ಕಡೆ ನೆಲ ಹಾಸಿಗೆಯ ಮಣೆಗಳು ಕೂಡ ಹಾಳಾಗಿವೆ. ಇದು ಮುಂದೆ ಅನಾಹುತಕ್ಕೆ ದಾರಿ ಮಾಡಿಕೊಡುವ ಮೊದಲು ಈ ತೂಗು ಸೇತುವೆಯನ್ನು ಉತ್ತಮ ರೀತಿ ಬಣ್ಣ ಲೇಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಒತ್ತಾಯಿಸಿದ್ದಾರೆ.
ಪ್ರವಾಸಿಗರ ದೂರು
ಈ ಸೇತುವೆ ನಿರ್ಮಾಣಗೊಂಡು ಸುಮಾರು 13 ವರ್ಷಗಳಾಗಿದ್ದು ಅಂದಿನಿಂದ ಇಲ್ಲಿಯವರೆಗೆ ಒಮ್ಮೆಯಾದರೂ ಸೂಕ್ತ ನಿರ್ವಹಣೆ ಮಾಡಿದ್ದು ಕಂಡುಬಂದಿಲ್ಲ. ಇದಲ್ಲದೇ ಅಕ್ಕಪಕ್ಕದ ಗ್ರಾಮಸ್ಥರು ತಾವು ಓಡಾಡುವ ಸೇತುವೆಯನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂಬ ಅರಿವು ಇಲ್ಲದಿರುವುದು ಸೇತುವೆ ದುಸ್ಥಿತಿಗೆ ಪ್ರಮುಖ ಕಾರಣ ಎಂದು ಪ್ರವಾಸಿಗರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement