ಭಾರತೀಯರ ಕಾವ್ಯ ಮೀಮಾಂಸೆಯೇ ಪಾಶ್ಚಾತ್ಯರ ವಿಮರ್ಶೆ: ಸಾಹಿತಿ ಮಲ್ಲೇಶಗೌಡ
ಹಾಸನ: ಪಾಶ್ಚಾತ್ಯರು ಬಳಸುವ ವಿಮರ್ಶೆ ಪದಕ್ಕೆ ಭಾರತೀಯ ಸಾಹಿತ್ಯ ಪರಂಪರೆಯಿಂದ ಬಳಸುವ ಮೀಮಾಂಸೆ ಪದಕ್ಕೆ ಮೂಲತಃ ವ್ಯತ್ಯಾಸ ಕಾಣದಿದ್ದರೂ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ನಾವು ಕಾವ್ಯ ಎಂದು ಒಪ್ಪುತ್ತೇವೆ ಎಂದು ಸಾಹಿತಿ ಡಾ. ಎಚ್.ಎಲ್. ಮಲ್ಲೇಶಗೌಡ ಹೇಳಿದರು.
ಅವರು ಹೊಸಲೈನ್ ರಸ್ತೆಯ ಎಸ್.ಜಿ.ಆರ್. ಶಾಲೆಯಲ್ಲಿ ಶ್ರೀಮತಿ ಮಮತಶಿವುರವರ ಪ್ರಾಯೋಜಕತ್ವದಲ್ಲಿ ನಡೆದ 204ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಕಾವ್ಯ ಮೀಮಾಂಸೆ ಭಾರತೀಯ ಸಾಹಿತ್ಯ ಪರಂಪರೆ ಎಂಬ ವಿಷಯದಡಿ ಉಪನ್ಯಾಸ ನೀಡಿದರು.
ಕಾವ್ಯದೊಳಗಿನ ಸೌಂದರ್ಯವನ್ನು ವಿವೇಚನೆ ಮಾಡುವ ಶಾಸ್ತ್ರವೇ ಅಲಂಕಾರ ಎಂದು ಕರೆದನು ಎಂದು ಅವರು ವಿವರಿಸಿದರು.
ಬಾಮಹ ಮತ್ತು ಭರತ: ಕಾವ್ಯ ಮೀಮಾಂಸೆಗೆ ಬಾಮಹ ಮತ್ತು ಭರತ ಎರಡು ರೆಕ್ಕೆಗಳಿದ್ದಂತೆ. ಇವರಿಬ್ಬರು ತಮ್ಮ ತಮ್ಮ ವಿವೇಚನೆಗಳ ದಿಶೆಯಲ್ಲಿ ಮೀಮಾಂಸೆಯ ರೂಪುಗಳನ್ನು ಹೊಳೆಸುತ್ತಾ ಸಾಗಿದರು. ಬಾಮಹನ ನಂತರ ಅಲಂಕಾರ ಶಾಸ್ತ್ರಕ್ಕೆ ಒಂದು ಗಟ್ಟಿತನ ಬಂದದ್ದು ಅದೇ ಮೂರನೇ ಶತಮಾನದಲ್ಲಿದ್ದ ದಂಡಿ ಎಂಬ ಕವಿಯ ಮೂಲಕ. ಕಾವ್ಯದ ಶೋಭೆ ಹೆಚ್ಚಿಸುವ ಕಾವ್ಯದೊಳಗಿನ ಧರ್ಮವನ್ನು ಅಲಂಕಾರವೆಂದು ದಂಡಿ ಕರೆಯುತ್ತಾನೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಡಾ. ಕೆ.ಕೆ. ಜಯಚಂದ್ರಗುಪ್ತ, ಶೀಟಿ, ಚಂದ್ರಕಾಂತ ಪಡೆಸೂರ, ಶಾಂತ ಅತ್ನಿ, ವನಜಾಕ್ಷಿ, ವಾಸು ಎಸ್.ಕೆ, ಬಿ. ವೇದಾವತಿ, ಆಹನ, ಭಾರತಿ ಹಾದಿಗೆ, ಸುಕನ್ಯ ಮುಕುಂದ, ಕುಮುದ ಎಂ.ಆರ್, ಪದ್ಮ ಮಂಜುನಾಥ್, ಶ್ರೀವಿಜಯ ಹಾಸನ, ಗಿರಿಜಾದಿನಕರ, ರೂಪಹಾಸನ, ಕಲಾವತಿಮಧುಸೂದನ್, ಗೊರೂರುಶಿವೇಶ್, ಎನ್.ಎಲ್.ಚನ್ನೇಗೌಡ, ಸುರೇಶ್ ಗುರೂಜಿ, ಮಮತಾಶಿವು ಮುಂತಾದವರು ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಅಹಮ್ಮದ್ ಹಗರೆ, ಶಿವು, ಗೋಪಾಲ್ ಇತರರು ಇದ್ದರು. ಶಾಂತ ಅತ್ನಿ ಪ್ರಾರ್ಥಿಸಿದರು, ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.