ಲೋಕ ಅದಾಲತ್‌ನಲ್ಲಿ 800 ಪ್ರಕರಣ ಇತ್ಯರ್ಥ
ಅರಸೀಕೆರೆ: ಸರ್ವೋಚ್ಚ ನ್ಯಾಯಲಯದ ಆದೇಶದ ಮೇರೆಗೆ ನಡೆಸಲಾಗುತ್ತಿರುವ ರಾಷ್ಟ್ರೀಯ ಲೋಕ ಆದಾಲತ್ ಕಾರ್ಯಕ್ರಮದಲ್ಲಿ ಈಗಾಗಲೇ 800ಕ್ಕೂ ಹೆಚ್ಚಿನ ಪ್ರಕರಣಗಳನ್ನು ಪರಸ್ಪರ ರಾಜಿ- ಸಂಧಾನಗಳ ಮೂಲಕ ಇತ್ಯರ್ಥ ಮಾಡಲಾಗಿದ್ದು, ಇದರ ಮಹತ್ವವನ್ನು ಅರಿತು ಸಾರ್ವಜನಿಕರು, ಕಕ್ಷಿದಾರರು ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಕಲಾ ಇಂದು ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಕಲಾ ಅವರು ಇಂದು ನ್ಯಾಯಾಲಯ ಆವರಣದಲ್ಲಿ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿ, ರಾಷ್ಟ್ರೀಯ ಲೋಕ ಆದಾಲತ್ ಕಾರ್ಯಕ್ರಮ ಜ. 6ರಿಂದ ಆರಂಭವಾಗಿದ್ದು, ಏ. 12ರವರೆಗೂ ನಡೆಯಲಿದೆ. ಆದಕಾರಣ, ತಾಲೂಕಿನ ಸಾರ್ವಜನಿಕರು ಮತ್ತು ಪಟ್ಟಣದ ವಿವಿಧ ನ್ಯಾಯಾಲಯಗಳಲ್ಲಿ ದೂರು ದಾಖಲಿಸಿರುವ ಕಕ್ಷಿದಾರರು ಈ ಲೋಕ ಅದಾಲತ್ ನ್ಯಾಯಾಲಯದ ಮುಂದೆ ಬಂದು ಪರಸ್ಪರರು ಸಂಧಾನದ ಮೂಲಕ ಭಾಗಶಃ, ಜೀವನಾಂಶ, ಒಕ್ಕಲೆಬ್ಬಿಸುವ, ಕಂದಾಯ ಇಲಾಖೆಯ ತಪ್ಪು ಒಪ್ಪುಗಳ ತಿದ್ದುಪಡಿಗಳು, ಲಘು ಅಪರಾಧ ಪ್ರಕರಣಗಳು ಹಾಗೂ ಭಾರತೀಯ ದಂಡ ಸಂಹಿತೆ ಕಾಯ್ದೆಗೆ ಒಳಪಟ್ಟಂತೆ ಸಣ್ಣಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಲು ವಿಶೇಷ ಅವಕಾಶವನ್ನು ಘನ ನ್ಯಾಯಾಲಯದ ಮೂಲಕ ನೀಡಲಾಗಿದೆ ಎಂದರು.
ಪ್ರಥಮ ಸ್ಥಾನ: ಮಾ. 1 ರವರೆಗೂ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 63 ಪ್ರಕರಣಗಳು, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 526 ಪ್ರಕರಣಗಳು, ಹಾಗೂ ಅಪರ ಸಿವಿಲ್ ನ್ಯಾಯಾಲಯದಲ್ಲಿ 175 ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಅವರು ಹೇಳಿದರು.
ಕಳೆದ ಸಾಲಿನಲ್ಲಿ ರಾಜ್ಯದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಅರಸೀಕೆರೆ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದನ್ನು ಅವರು ಸ್ಮರಿಸಿದರು.
ಹೆಚ್ಚಿನ ಆಸಕ್ತಿ: ಈಗಾಗಲೇ 500ಕ್ಕೂ ಹೆಚ್ಚಿನ ಚೆಕ್‌ಬೌನ್ಸ್ ಕೇಸ್‌ಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದೆ.
ಅಲ್ಲದೇ, ತಾಲೂಕು ತಹಸೀಲ್ದಾರ್ ಜೊತೆಯಲ್ಲಿ ಮಾತುಕತೆ ನಡೆಸುವ ಮೂಲಕ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಸಣ್ಣಪುಟ್ಟ ವ್ಯಾಜ್ಯಗಳಾದ ಖಾತೆ ಬದಲಾವಣೆ, ಪಹಣಿಯಲ್ಲಿ ಹೆಸರು ಬದಲಾವಣೆ, ಸಣ್ಣಪುಟ್ಟ ತಪ್ಪುಗಳ ತಿದ್ದುಪಡಿ ಕುರಿತಂತೆ ಇರುವ ವ್ಯಾಜ್ಯಗಳನ್ನು ಅಧಿಕಾರಿಗಳ ಸಹಾಯದ ಮೂಲಕ ಇತ್ಯರ್ಥವನ್ನು ಮಾಡಲು ನ್ಯಾಯಾಲಯ ಹೆಚ್ಚಿನ ಆಸಕ್ತಿ ವಹಿಸುತ್ತಿದೆ ಎಂದು ತಿಳಿಸಿದರು.
12ರವರೆಗೂ ಅವಕಾಶ: ಈ ಎಲ್ಲಾ ಪ್ರಕರಣಗಳ ರಾಜಿ- ಸಂಧಾನ ಪ್ರಕ್ರಿಯೆಯಲ್ಲಿ ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇನ್ನಿತರ ಎಲ್ಲಾ ವಕೀಲರ ಹೆಚ್ಚಿನ ಸಹಕಾರ ತಮಗೆ ದೊರೆಯುತ್ತಿರುವ ಕಾರಣ ಲೋಕ ಅದಾಲತ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದ್ದು, ಮುಂದಿನ ಮಾ. 12ರವೆರಗೂ ಇರುವ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕೆಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ್ ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚೆನ್ನಪ್ಪ ಕುರುಬೇಟ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಸರ್ವೇಶ್ ಇದ್ದರು.
'ಸಂಧಾನದ ಮೂಲಕ ಇತ್ಯರ್ಥ'
ಬೇಲೂರು: ರಾಷ್ಟ್ರೀಯ ಲೋಕ ಅದಾಲತ್ ಬಹಳ ಪ್ರಯೋಜನಕಾರಿಯಾಗಿದ್ದು, ಯಾವುದೇ ಖರ್ಚಿಲ್ಲದೆ ಕಕ್ಷಿದಾರರನ್ನು ಕರೆಸಿ ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಈ. ರಾಜೀವ್ ಗೌಡ ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಲೋಕ ಅದಾಲತ್ ಸರ್ವೋಚ್ಛ ನ್ಯಾಯಾಲಯದಿಂದ ತಾಲೂಕು ನ್ಯಾಯಾಲಯದಲ್ಲಿ ಏ. 14ರವರೆಗೆ ನಡೆಯಲಿರುವ ಲೋಕ ಅದಾಲತ್‌ನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರರು.
ಕಳೆದ ಬಾರಿಯ 2013ರಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ 535 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಲಾಗಿದ್ದು, ಅದೇ ರೀತಿ ರಾಜಿ ಸಂದಾನದ ಮೂಲಕವೇ ಇನ್ಸುರೆನ್ಸ್ ಕಂಪೆನಿಯಿಂದ ರು. 5 ಲಕ್ಷಕ್ಕೂ ಹೆಚ್ಚು ಹಣವನ್ನು ಅಫಘಾತಗಳಲ್ಲಿ ಗಾಯಗೊಂಡವರಿಗೆ ಕೊಡಿಸಲಾಗಿದೆ.
ಕಕ್ಷಿದಾರರು ಲೋಕ ಅದಾಲತ್ ಮೂಲಕ ನ್ಯಾಯಾಲಯಕ್ಕೆ ಬಂದು ಪ್ರಕರಣಗಳನ್ನು ಬಗೆಹರಿಸಿಕೊಳ್ಳ ಬಹುದು. ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶೆ ಶರ್ಮಿಳಾ, ವಕೀಲರ ಸಂಘದ ಅಧ್ಯಕ್ಷ ನಿಂಗರಾಜು, ಕಾರ್ಯದರ್ಶಿ ಜಿ.ಟಿ. ಪ್ರಕಾಶ್ ಇದ್ದರು.