ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿದ ತಂದೆ
ಹಾಸನ: ವ್ಯಕ್ಯಿಯೋರ್ವ ತಮ್ಮ ಎರಡು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ, ತಾನು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಬೇಲೂರು ತಾಲೂಕಿನ ಅಂಬೇಡ್ಕರ್ ನಗರದ ನಂದೀಶ್ (32) ಎಂಬ ವ್ಯಕ್ತಿ ವಿಷಕುಡಿದಾತ. ತಾನು ವಿಷ ಕುಡಿಯುವ ಮೊದಲು, ತನ್ನ ಮಕ್ಕಳಾದ ಪ್ರೇಕ್ಷಾ (6) ಮತ್ತು ನಿಶಾ (5)ಗೆ ವಿಷ ಕುಡಿಸಿ ತಾನೂ ವಿಷ ಕುಡಿದಿದ್ದಾನೆ. ತೀವ್ರವಾಗಿ ಅಸ್ವಸ್ಥರಾಗಿರುವ ಈ ಮೂವರೂ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿ ನರ್ಸ್: ನಂದೀಶ್ ವೃತ್ತಿಯಲ್ಲಿ ಪೇಂಟರ್. ಈತನ ಪತ್ನಿ ಭಾಗ್ಯ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಿಗೊಮ್ಮೆ ಅವರು ಹಾಸನಕ್ಕೆ ಭಾಗ್ಯ ಬಂದು, ಪತಿ ಮತ್ತು ತನ್ನ ಇಬ್ಬರು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಬಡತನ ಕಾರಣ?: ನಂದೀಶ್ ಮತ್ತು ಭಾಗ್ಯ ಇವರಿಬ್ಬರು ದುಡಿಯುತ್ತಿದ್ದರೂ ಜೀವನ ನಿರ್ವಹಣೆ ಸಾಧ್ಯವಾಗದ ಕಾರಣ ಸಾಕಷ್ಟು ಅರ್ಥಿಕ ಮುಗ್ಗಟನ್ನು ಎದುರಿಸುತ್ತಿದ್ದರು. ಇವರ ದುಡಿಮೆಯು ಒತ್ತಿನ ಕೂಳಿಗೆ ಕಷ್ಟಪಡುವಂತಾಗಿತ್ತು. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಸಾಲಗಳನ್ನು ಮಾಡಿಕೊಂಡಿದ್ದ ಇವರು, ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ನಂದೀಶ್ ತನ್ನ ಎರಡು ಮಕ್ಕಳೊಂದಿಗೆ ಹಾಸನಕ್ಕೆ ಬಂದು ವಿಷ ಸೇವಿಸಿರಬಹುದು ಎಂದು ಕುಟುಂಬದವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಂದೀಶ್ ಪತ್ನಿ ಭಾಗ್ಯ, ಕಷ್ಟ ಇದ್ದಾಗ ನಮ್ಮ ಕಷ್ಟಕ್ಕೆ ಸಂಬಂಧಿಕರ್ಯಾರೂ ಬಂದು ಕೇಳಲಿಲ್ಲ. ಆದರೆ, ಈಗ ನನ್ನ ಪತಿ ಹಾಗೂ ಮಕ್ಕಳು ಆಸ್ಪತ್ರೆಯಲ್ಲಿ ಇರುವಾಗ ಎಲ್ಲರೂ ನೋಡಲು ಬರುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀವ್ರ ನಿಗಾ ಘಟಕದಲ್ಲಿ
ನಗರದ ಮಹಾರಾಜಾ ಪಾರ್ಕ್‌ನಲ್ಲಿ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ನಂದೀಶ್ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾನೆ. ಆನಂತರ ಮಕ್ಕಳನ್ನು ಮಹಾರಾಜ ಪಾರ್ಕ್‌ಗೆ ಕರೆತಂದು, ತಮ್ಮ ಎರಡು ಹೆಣ್ಣುಮಕ್ಕಳಿಗೆ ವಿಷ ಕುಡಿಸಿ, ತಾನೂ ವಿಷ ಕುಡಿದ್ದಾನೆ ಎಂದು ಹೇಳಲಾಗಿದೆ. ತಕ್ಷಣ ನಂದೀಶ್ ಹಾಗೂ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥ್ಥಗೊಂಡಿರುವ ಈ ಮೂವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.