ತೆಂಗು ಬೆಳೆಗಾರರ ಹಿತ ಬಲಿಕೊಟ್ಟ ಸರ್ಕಾರ
ಅರಸೀಕೆರೆ: ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಹಿತಶಕ್ತಿ ಕಾಪಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಹಣ ಲೂಟಿ ಮಾಡಲು ಅವಕಾಶ ಮಾಡಿಕೊಡುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಶುಕ್ರವಾರ ಸಂಜೆ ಹರಿಹಾಯ್ದ ಪ್ರಸಂಗ ನಡೆಯಿತು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಶುಕ್ರವಾರ ಶಾಸಕರ ನೇತೃತ್ವದಲ್ಲಿ ಮಂಡಿ ವರ್ತಕರು ಮತ್ತು ರೈತರು ಹಾಗೂ ಖಾಸಗಿ ಕಂಪನಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲ ಒಂದು ಕಡೆಯಾಗಿದ್ದು, ನಾನಾ ರೋಗಗಳ ಭಾಧೆಯಿಂದ ತೆಂಗು ಮತ್ತು ಕೊಬ್ಬರಿ ಇಳುವರಿ ಕೂಡ ತುಂಬಾ ಕಡಿಮೆಯಾಗಿದ್ದು, ಆಳಿದು ಉಳಿದ ಕೊಬ್ಬರಿಯನ್ನು ಮಾರುಕಟ್ಟೆಗೆ ರೈತರು ತಂದು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುವ ಮೂಲಕ ರೈತರು ಹಿತಾಶಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇ- ಟೆಂಡರ್ಗೆ ವಿರೋಧ: ಈ ನೂತನ ಇ- ಟೆಂಡರ್ ಪದ್ಧತಿಯನ್ನು ಜಾರಿಗೆ ತಂದಿರುವ ಸರ್ಕಾರ ಎನ್ಸಿಡಿಇ ಎಕ್ಸ್ ಖಾಸಗಿ ಕಂಪನಿಗೆ ಶೇ. 2ರಷ್ಟು ಕಮಿಷನ್ ನಿಗದಿ ಮಾಡಿದ್ದು, ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರು. ವ್ಯಾಪಾರ, ವ್ಯವಹಾರದ ಮೂಲಕ ಹೆಚ್ಚಿನ ಬಂಡವಾಳ ಇಲ್ಲದೆ ಲಕ್ಷಾಂತರ ರು.ಗಳನ್ನು ಖಾಸಗಿ ಕಂಪನಿಗಳು ಲೂಟಿ ಮಾಡಲು ಸರ್ಕಾರ ವರದಾನವಾಗಿ ನೀಡಿದೆ. ಈ ಪದ್ಧತಿಯ ಮೂಲಕ ರೈತರಿಂದ ಹಗಲು ದರೋಡೆ ಮಾಡಲು ಪರೋಕ್ಷವಾಗಿ ಅನುಮತಿ ನೀಡಿದೆ ಎಂದು ಅವರು ಕಿಡಿಕಾರಿದರು.
ತೆಂಗುಬೆಳೆಗಾರರ ಅಸಮಾಧಾನ: ಈ ಹಿಂದೆ ಟೆಂಡರ್ ಪದ್ಧತಿಯಲ್ಲಿ ವರ್ತಕರು ಮತ್ತು ರೈತರ ನಡುವಿನ ಮಧುರ ಭಾಂದವ್ಯ ಇಲ್ಲದಂತಾಗಿ ರೈತರಿಗೆ ಯಾವ ವರ್ತಕರು ಮುಂಗಡ ಹಣವನ್ನು ನೀಡುವುದಲ್ಲ ಎಂಬ ಆತಂಕ ನಿರ್ಮಾಣವಾಗಿದೆ.
ಹಾಗೇಯೇ ವರ್ತಕರು, ರೈತರಿಗೆ ಯಾವ ಗ್ಯಾರಂಟಿಯ ಆಧಾರದ ಮೇಲೆ ಹಣ ನೀಡಬೇಕು ಎಂಬ ಗೊಂದಲ ಉಂಟಾಗಿದ್ದು, ಬಡವರ್ಗದ ಜನರು ಇನ್ನು ಮುಂದೆ ಬಡ್ಡಿಯಲ್ಲಿ ಹಣ ಪಡೆಯುವ ಪರಿಸ್ಥಿತಿ ಮಾರುಕಟ್ಟೆಯಲ್ಲಿ ನಿರ್ಮಾಣ ಆಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಹಲವಾರು ತೆಂಗು ಬೆಳೆಗಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಕಾರ್ಯದರ್ಶಿ ಮಂಜುನಾಥ್, ಎನ್ಸಿಡಿಇ ಎಕ್ಸ್ ಖಾಸಗಿ ಸಂಸ್ಥೆ ಅಧಿಕಾರಿ ಪಟ್ಟಾಭಿರಾಮನ್, ಮಂಡಿ ವರ್ತಕರ ಸಂಘದ ಅಧ್ಯಕ್ಷ ಜಿ.ವಿ. ಟಿ.ಬಸವರಾಜು, ಟಿ.ಎಸ್. ರುದ್ರಯ್ಯ, ಜಿ.ವಿ. ಬಸವರಾಜು, ಮಹಾವೀರ್, ಕೆ. ರಮೇಶ್, ಎಸ್.ಬಿ.ಟಿ. ವೆಂಕಟೇಶ್ ಬಾಬು, ತೆಂಗು ಬೆಳೆಗಾರರಾದ ಡಿ.ಪಿ.ಮಲ್ಲಪ್ಪ, ಮಲ್ಲಿಕಾರ್ಜುನಪ್ಪ, ಶಾಂತಣ್ಣ, ಬಸವರಾಜು, ಚಂದ್ರಪ್ಪ, ಪಾಲಾಕ್ಷ, ಚನ್ನಬಸಪ್ಪ, ರುದ್ರಪ್ಪ, ಬೊಮ್ಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.