ಮೂರು ದಶಕಗಳಿಂದ ಇಲ್ಲಿ ಗ್ಯಾಸ್ ಟ್ರಬಲ್!
ಅರಕಲಗೂಡು: ಮತ್ತೆ ಬಂದಿದೆ ಲೋಕಸಭಾ ಚುನಾವಣೆ. ಆದರೆ ಅರಕಲಗೂಡು ಜನತೆಯ ಬಹುಮುಖ್ಯ ಸಮಸ್ಯೆಗಳಲ್ಲೊಂದಾದ ಅಡುಗೆ ಅನಿಲ ಸಮಸ್ಯೆಗೆ ಮಾತ್ರ ಪರಿಹಾರ ದೊರೆತಿಲ್ಲ. ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಇಲ್ಲಿಯ ಜನರ ಸಮಸ್ಯೆಗಳಲ್ಲಿ ಅಡುಗೆ ಅನಿಲ ಪಡೆಯುವುದೂ ಒಂದು ಸವಾಲೇ ಸರಿ.
ಅಡುಗೆ ಅನಿಲವನ್ನು ಪಡೆಯುವ ದುಸ್ತರ ಕ್ರಮಗಳು ಇಲ್ಲಿ ಜಾರಿಯಲ್ಲಿದೆ. ಪಟ್ಟಣದಲ್ಲಿ ಅಡುಗೆ ಅನಿಲ ಬಳಕೆಯ ಜಾರಿ ಬಂದು ಎರಡು ದಶಕಗಳು ದಾಟಿದೆ. ಆದರೆ ಇಂದಿಗೂ ತಾಲೂಕಿಗೆ ಒಂದು ಅಡುಗೆ ಅನಿಲ ಏಜೆನ್ಸಿ ದೊರೆತಿಲ್ಲ. ಪಕ್ಕದ ತಾಲೂಕು ಹೊಳೆನರಸೀಪುರದಲ್ಲಿ ಏಜೆನ್ಸಿ ಬಂದು ಮೂರು ದಶಕ ಆಗಿದೆ. ಪ್ರಸಕ್ತ ಹಾಸನದ ಏಜೆನ್ಸಿಯವರು ಅರಕಲಗೂಡು ಪಟ್ಟಣಕ್ಕೆ ತಿಂಗಳಲ್ಲಿ ಮೂರು ಬಾರಿ ಬಂದು ವಿತರಿಸಿ ಹೋಗುತ್ತಾರೆ.
ಪ್ರತಿ ಮೂರು ಭಾನುವಾರಗಳಲ್ಲಿ ಬಂದು ವಿತರಿಸಿ ಹೋಗುವ ಅಡುಗೆ ಅನಿಲದ ಸಿಲಿಂಡರುಗಳಿಗಾಗಿ ಮೊದಲೇ ಬುಕ್ ಮಾಡಿಸಿ ಚಾತಕ ಪಕ್ಷಿಗಳಂತೆ ಕಾದು ಕೂರಬೇಕು. ಪ್ರತಿ ವಾರ 275ರಿಂದ 300 ಸಿಲಿಂಡರ್‌ಗಳನ್ನು ಲಾರಿಯಲ್ಲಿ ತಂದು ಒಂದು ನಿರ್ದಿಷ್ಟ ಜಾಗದಲ್ಲಿ ವಿತರಿಸಿ ಹೋಗುತ್ತಾರೆ. ಅದಕ್ಕಾಗಿ ಹಿಂದಿನ ದಿನದಿಂದಲೇ ಸಾಲಿನಲ್ಲಿ ಸಿಲಿಂಡರ್ ಇಟ್ಟು ಕಾಯಬೇಕು. ಒಂದು ವೇಳೆ ನೀವು 301ನೇ ಸಿಲಿಂಡರ್‌ನವರಾದರೆ ನಿಮ್ಮ ಗ್ರಹಚಾರ. ಮುಂದಿನ ವಾರ ಮತ್ತೆ ಬುಕ್ ಮಾಡಿಸಿ ಎಂದಿನಂತೆ ಒಂದು ದಿನ ಮುಂಚಿತವಾಗಿ ಬಂದು ಸಾಲಿನಲ್ಲಿ ಸಿಲಿಂಡರ್ ಇಟ್ಟು ಕಾಯುವ ಕಾಯಕ. ಇದು ತಾಲೂಕಿನ ಅಡುಗೆ ಅನಿಲ ಗ್ರಾಹಕರು ಎರಡು ದಶಕಗಳಿಂದ ರೂಢಿಸಿಕೊಂಡು ಬಂದಿರುವ ಪದ್ಧತಿಯಾಗಿಬಿಟ್ಟಿದೆ.
ದುಬಾರಿ ವೆಚ್ಚ: ಪ್ರತಿ ಸಿಲಿಂಡರ್ ತಂದು ದಿನವೆಲ್ಲಾ ಕಾದು ಹೋಗುವ ವೇಳೆ ಸಿಲಿಂಡರ್ ತಂದು ತೆಗೆದುಕೊಂಡು ಹೋಗುವ ಆಟೋ ಬಾಡಿಗೆ ಸುಮಾರು ರು. 50 ಹೆಚ್ಚಿಗೆ ತಗುಲುತ್ತದೆ.ಗ್ರಹಚಾರ ಕೆಟ್ಟು ಒಂದು ವಾರ ಸಿಲಿಂಡರ್ದೊರಕದಿದ್ದರೆ ಮತ್ತದೇ 50 ರೂ ಹೆಚ್ಚುವರಿ ವೆಚ್ಚ ತಗುಲುತ್ತದೆ.ಸಮಯ,ಹಣ ಎಲ್ಲವೂ ದುಬಾರಿಯಾಗುತ್ತದೆ.ಕೆಲವರು ಈ ವ್ಯವಸ್ಥೆಗೆ ಹೊಂದಿಕೊಂಡಿದ್ದರೆ,ಮತ್ತೆ ಕೆಲವು ಉಳ್ಳವರು ಆಟೋಗಳಿಗೆ ಸಿಲಿಂಡರ್ಹಾಗೂ ಹೆಚ್ಚುವರಿ ಹಣ ತೆತ್ತು ಕೈತೊಳೆದುಕೊಳ್ಳುತ್ತಾರೆ.ಇದು ಕೆಲವು ಆಟೋಗಳಿಗೆ ಒಂದು ಕಾಯಕವಾಗಿದೆ.15-20 ಸಿಲಿಂಡರುಗಳನ್ನು ಹಿಂದಿನ ದಿನವೇ ಸಾಲಿನಲ್ಲಿ ಜೋಡಿಸಿ ಪಡೆದುಕೊಳ್ಳುತ್ತಾರೆ.ಈ ಪದ್ದತಿಯಿಂದಾಗಿ ತಾಲೂಕಿನ ಜನರ ವೀಕ್ ಎಂಡ್, ಸಿಲಿಂಡರ್‌ಗಾಗಿ ಕಾಯುವ ಕಾಯಕದಲ್ಲೇ ಮುಗಿದುಹೋಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ, ಸಮಸ್ಯೆಗೆ ಪರಿಹಾರ ನೀಡಬೇಕಿದೆ.
ಗ್ರಾಹಕರಿಗೆ ಜಾಗರಣೆ
ರಾತ್ರಿ ಪಾಳಿಯ ಮೇಲೆ ಕಾಯುವ ಗ್ರಾಹಕರು-ಅಡುಗೆ ಅನಿಲ ಸಿಲಿಂಡರ್‌ಗಳು ದೊರಕುತ್ತವೋ ಇಲ್ಲವೋ ಎಂಬ ದಾವಂತದಿಂದ ಗ್ರಾಹಕರು (ಪುರುಷರು,ಮಹಿಳೆಯರು,ಮಕ್ಕಳು ಬೇಧವಿಲ್ಲದೇ) ಭಾನುವಾರ ದೊರಕುವ ಸಿಲಿಂಡರ್‌ಗಾಗಿ ಹಿಂದಿನ ರಾತ್ರಿಯೇ ಸಾಲುಗಟ್ಟಿ ನಿಲ್ಲುತ್ತಾರೆ. ರಾತ್ರಿಯಲ್ಲೂ ಎರಡು ಪಾಳಿ ಮಡಿ ಕಾಯುವ ಸ್ಥಿತಿ ಇದೆ.ಇದು ಇಲ್ಲಿನ ಅಡುಗೆ ಅನಿಲ ಗ್ರಾಹಕರು ಎದುರಿಸುತ್ತಿರುವ ಅವ್ಯವಸ್ಥೆ.
ಗೌಡರು ಭರವಸೆ ನೀಡಿದ್ರು...
ಆರು ತಿಂಗಳ ಹಿಂದಷ್ಟೇ ಅರಕಲಗೂಡಿಗೆ ಬಂದಿದ್ದ ಸಂಸದ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಈ ಬಗ್ಗೆ ಕೇಳಿದಾಗ ತಾವು ಈಗಾಗಲೇ ಎರಡು ಬಾರಿ ಪತ್ರಬರೆದಿದ್ದೇನೆ. ಸಂಬಂಧಪಟ್ಟವರಿಗೆ ಮತ್ತೊಂದು ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು. ಆದರೆ, ಸಮಸ್ಯೆ ಮಾತ್ರ ಹಾಗೇ ಉಳಿದಿದೆ.
-ಅ.ರಾ. ಸುಬ್ಬರಾವ್