ಸಹಕಾರ ಸಂಘದ ಅಧ್ಯಕ್ಷರಾಗಿ ಕಂಠಿ ಪುನರಾಯ್ಕೆ
ಹಾಸನ: ನಗರದ ಸಾಲಗಾಮೆ ರಸ್ತೆ, ಉತ್ತರ ಬಡಾವಣೆಯಲ್ಲಿರುವ ನಗರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಹಿರಿಯ ಸಹಕಾರಿ ಧುರೀಣ ಹೆಚ್.ಆರ್.ಎನ್. ಕಂಠಿ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಹೆಚ್.ಕೆ. ಗೋಪಾಲ್, ಹೆಚ್.ಸಿ. ಮಂಜುನಾಥ್, ಕೇ. ಶೇಷಾದ್ರಿ, ಸುಜಿತ್ ಮೊರೆ, ಚಂದ್ರಹಾಸ, ಬಾಲೇಗೌಡ, ಹೆಚ್.ಸಿ. ಅರುಣ್ ಕುಮಾರ್, ಎಂ.ಜಿ. ರತ್ಮಮ್ಮ, ಯಶೋಧಮ್ಮ ಇವರು ಸರ್ವಾನುಮತದಿಂದ ಸಂಘದ ಅಧ್ಯಕ್ಷರನ್ನಾಗಿ ಹೆಚ್.ಆರ್.ಎನ್. ಕಂಠಿ ಅವರನ್ನು ಆಯ್ಕೆ ಮಾಡಿದ್ದಾರೆ.
ಸಹಕಾರ ಸಂಘದ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿದ್ದು, ಜಿ. ಭಾಗ್ಯ ಇವರ ನೇತೃತ್ವದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಂ. ಮಲ್ಲೇಶಗೌಡ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸಂಘದ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ವಿನಂತಿಸಿದರು.
ಹಿರಿಯರ ಮಾರ್ಗದರ್ಶನ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಲ್ಲೇಶಗೌಡರ ಶ್ರಮ ಸಾರ್ಥಕವಾಗಿದೆ ಎಂದು ನಿರ್ದೇಶಕ ಕೆ. ಶೇಷಾದ್ರಿ ತಿಳಿಸಿದ್ದಾರೆ.
ಸ್ಕಾಲರ್ಸ್ ವರ್ಲ್ಡ್ ಶಾಲೆಯಲ್ಲಿ ಆಕಾಶ ವೀಕ್ಷಣೆ
ಹಾಸನ: ನಗರದ ಉತ್ತರ ಬಡಾವಣೆಯಲ್ಲಿ ಇರುವ ದ ಸ್ಕಾಲರ್ಸ್ ವರ್ಲ್ಡ್ ಸ್ಕೂಲ್ನಲ್ಲಿ ಇತ್ತೀಚೆಗೆ ಶಾಲೆಯ ಮಕ್ಕಳಿಗೆ ಹಾಗೂ ಪೋಷಕರಿಗೆ ದೂರದರ್ಶಕದ ಮೂಲಕ ಆಕಾಶ ವೀಕ್ಷಣೆ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಪರಿಸರ ಶಿಕ್ಷಣ ಕೇಂದ್ರದ ರವಿಶಂಕರ್ ಅವರು ದೂರದರ್ಶಕದ ನೆರವಿನಿಂದ ಆಕಾಶದಲ್ಲಿ ಗುರುಗ್ರಹ ಹಾಗೂ ಅದರ ನಾಲ್ಕು ಚಂದ್ರಗಳನ್ನು ತೋರಿಸಿದರು. ಅಹಮ್ಮದ್ ಅವರು ಗಣಕಯಂತ್ರದ ಮೂಲಕ ಗುರುಗ್ರಹ ಹಾಗೂ ಅದರ ಚಂದ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ಸಮೇತ ವಿವರಿಸಿದರು.
ಇದರಿಂದ ಮಕ್ಕಳು ಹಾಗೂ ಪೋಷಕರಿಗೆ ಸೌರವ್ಯೂಹದ ಬಗ್ಗೆ ಅರಿವು ಮೂಡಿತು. ಶಾಲಾ ಮಕ್ಕಳಿಗೆ ದೂರದರ್ಶಕದ ಮೂಲಕ ಗುರುಗ್ರಹ ವೀಕ್ಷಿಸುವುದು ಒಂದು ರೀತಿಯ ಮನೋರಂಜನೆಯಾಗಿ ಮಾರ್ಪಟ್ಟಿತು. ಶಿಕ್ಷಕಿ ರುಕಿಯಾ ಸ್ವಾಗತಿಸಿದರು. ರಚಿತ, ದರ್ಶಿನಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶೋಭ ವಂದಿಸಿದರು. ಪುಟ್ಟು ಎಜುಕೇಷನ್ ಟ್ರಸ್ಟ್ನ ಲಕ್ಷ್ಮೀನಾಗರಾಜು, ಭಾನುಪ್ರಕಾಶ್, ಚಂದ್ರಶೇಖರ್ ಇದ್ದರು.
ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ
ಹಾಸನ: 2012-13ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಗಳಲ್ಲಿ ಎ.ವಿ.ಕೆ. ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿದ್ದಾರೆ.
ಸಿ.ಬಿಝಡ್ನ ವಿದ್ಯಾರ್ಥಿನಿ ಕು.ಕೆ.ಎನ್. ನಯನಾ ಅವರು ಪ್ರಾಣಿಶಾಸ್ತ್ರದಲ್ಲಿ ಪ್ರೊ.ಎಮ್.ಆರ್. ರಾಜಶೇಖರ ಶೆಟ್ಟಿಯವರ ನಗದು ಬಹುಮಾನ, ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರದಲ್ಲಿ ರೋಟರಿ ಕ್ಲಬ್ ಆಫ್ ಮೈಸೂರು ಇವರ ಚಿನ್ನದ ಪದಕ ಮತ್ತು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಡಾ.ಕೆ. ಸೂರ್ಯನಾರಾಯಣ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನಗಳನ್ನು ಪಡೆದಿದ್ದಾರೆ
ಬಿ.ಎ ಅಂತಿಮ ಪದವಿ ಪರೀಕ್ಷೆಯಲ್ಲಿ ಕು. ಜಬೀನಾ ಫರ್ಹೀನ್ ಅವರು ರಾಜ್ಯಶಾಸ್ತ್ರದ ಐಚ್ಛಿಕ ವಿಷಯ 'ಭಾರತ ಸರ್ಕಾರ ಮತ್ತು ರಾಜಕಾರಣ'ದಲ್ಲಿ ಗೋವಿಂದರಾವ್ ಚಿನ್ನದ ಪದಕ ಪಡೆದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ವರ್ಗ ಬಹುಮಾನ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ
ಅರಸೀಕೆರೆ: ಪಟ್ಟಣದ ಹೊರವಲಯದ ಶ್ರೀಮಾರುತಿ ಸಚ್ಚಿದಾನಂದ ಸೇವಾಶ್ರಮದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಹೋತ್ಸವ ಧಾರ್ಮಿಕ ಸಮಾರಂಭ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪಟ್ಟಣದ ಮೈಸೂರು ರಸ್ತೆಯಲ್ಲಿನ ವಿದ್ಯಾನಗರದಲ್ಲಿರುವ ಶ್ರೀಮಾರುತಿ ಸಚ್ಚಿದಾನಂದ ಸೇವಾಶ್ರಮದ ಸತೀಶ್ ಶರ್ಮಾ ಗುರೂಜಿ ಅವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಾ. 5ರ ಬುಧವಾರದಿಂದ ಆರಂಭವಾಗಿರುವ ಶ್ರೀಮಹಾರುದ್ರ ಹೋಮ ಅಂಗವಾಗಿ ಗುರುವಾರ ಪ್ರಾತಃಕಾಲ ರುದ್ರ ಪುನಶ್ಚರಣೆ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹೋಮ ಕಾರ್ಯಕ್ರಮಗಳು ನೆರವೇರಿದ ನಂತರ ಶ್ರೀಲಕ್ಷ್ಮೀನರಸಿಂಹಸ್ವಾಮಿಯವರಿಗೆ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಸಾವಿರಾರು ಭಕ್ತಾಧಿಗಳು ಸೇರಿ ನೆರವೇರಿಸಿದರು. ಈ ಧಾರ್ಮಿಕ ಸಮಾರಂಭದ ನೇತೃತ್ವವನ್ನು ಆಗಮಿಕರಾದ ಮುರುಳೀಧರ ಶ್ರೀವತ್ಸ ಶರ್ಮಾ ಹಾಗೂ ಸೋಮಸುಂದರ ಭಟ್ಟ ವಹಿಸಿದ್ದರು, ಸೇವಾಶ್ರಮದ ಆಡಳಿತಾಧಿಕಾರಿ ಬಿ.ಎಸ್. ಸೇತುರಾಮ್, ಎ.ಕೆ. ವಿದ್ಯಾಶಂಕರ ಭಟ್ಟ, ಸಂಚಾಲಕ ಮುರುಳಿ ಮಂದಾರ್ತಿ ಕಾರ್ಯಕ್ರಮ ಆಯೋಜಿಸಿದ್ದರು.
ಧಾರ್ಮಿಕ ಸಮಾರಂಭದ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಇಂದು ಕಾನೂನು ಅರಿವು ಕಾರ್ಯಕ್ರಮ
ಅರಕಲಗೂಡು: ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕಾನೂ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ ವಹಿಸಲಿದ್ದು, ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಡಿ. ಕಂಬೇಗೌಡ ವಹಿಸುವರು. ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಿ.ಕೆ. ಗಿರೀಶ್, ಸಹಾಯಕ ಸರ್ಕಾರಿ ಅಭಿಯೋಜಕರಾದ ರಂಜನ್ ರಾವ್, ಕೆ.ಎಸ್. ನಾಗೇಂದ್ರ, ವಕೀಲರ ಸಂಘದ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್, ಖಜಾಂಚಿ ಜಿ.ಡಿ. ಮಹೇಶ್ ಕುಮಾರ್ ಉಪಸ್ಥಿತರಿರುವರು.
'ಪಠ್ಯೇತರ ಚಟುವಟಿಕೆ ಬಗ್ಗೆಯೂ ಗಮನಹರಿಸಿ'
ಬೇಲೂರು: ಪಟ್ಟಣದ ಶಾಂತಳಾ ವಿದ್ಯಾ ಸಂಸ್ಥೆಯಲ್ಲಿ ಇಲ್ಲಿಯವರೆಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶಾಂತಳಾ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಕೆ. ಭಗವಾನ್ ತಿಳಿಸಿದರು. ಪಟ್ಟಣದ ಶಾಂತಳಾ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ, ಈ ಸಂಸ್ಥೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗೆ ಹೋಗಿರುವ ಸಾಕಷ್ಟು ನಿದರ್ಶನಗಳಿವೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಹೊರತಾಗಿ ಸಾಂಸ್ಕಣತಿಕ ಮತ್ತು ಕ್ರಿಡೆಗಳಲ್ಲೂ ಸಹ ಸಾಕಷ್ಟು ವಿದ್ಯಾರ್ಥಿಗಳು ಹೆಸರು ತಂದು ಕೊಟ್ಟಿದ್ದಾರೆ. ಅಲ್ಲದೆ ಅವರು ಎತ್ತರಕ್ಕೆ ಬೆಳೆದಿರುವಂತಹ ನಿದರ್ಶನಗಳನ್ನು ಕಾಣಬಹುದಾಗಿದೆ, ಆದ್ದರಿಂದ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ತೊ.ಚ. ಅನಂತಸುಬ್ಬರಾಯ ಮಾತನಾಡಿ, ಇಂದಿನ ಶಿಕ್ಷಣ ಮಕ್ಕಳಿಗೆ ಕೇವಲ ಭೌತಿಕ ಮಟ್ಟಕ್ಕೆ ಸೀಮಿತವಾಗದೆ ಮಕ್ಕಳ ಮನೋವಿಕಾಸಕ್ಕೆ ನಾಂದಿಯಾಗಬೇಕು, ಮಕ್ಕಳು ಶಿಕ್ಷಣದ ಜತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಇನ್ನೂ ಮುಂತಾದ ಚಟುವಟಿಕೆಗಳ ಕಡೆ ಗಮನ ಹರಿಸಿ ಶಾಲೆಗೆ ಮತ್ತು ಹೆತ್ತವರಿಗೆ ಉತ್ತಮ ಹೆಸರು ತರುವಂತಹ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿಯರಾದ ಸುನೀತಾ, ರತ್ನಮಾಲಾ ಇತರರು ಇದ್ದರು.
ಸಮುದಾಯ ಭವನಕ್ಕೆ ಭೂಮಿಪೂಜೆ
ಹಾಸನ: ನಗರದ ಮಧ್ಯಭಾಗದಲ್ಲಿರುವ ಸುಮಾರು ಒಂದು ಸಾವಿರ ವರ್ಷಗಳ ಪ್ರಾಚೀನವಾದ ದೊಡ್ಡ ಬಸದಿಯ ಆವರಣದಲ್ಲಿ ಹಾಸನ ಜೈನ ಸಂಘವು ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿಚ್ಚಿಸಿರುವ ಸಮುದಾಯ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ದಿಗಂಬರ ಜೈನ ಆಚಾರ್ಯಶ್ರೀ 108 ಸಚ್ಚಿದಾನಂದಸಾಗರ ಮುನಿ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದು, ಜೈನ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಜೈನ ಸಮಾಜದವರು ಹಾಜರಿದ್ದರು. ಮಾನವ ಜನ್ಮವು ಸಿಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ಜೈನ ಧರ್ಮದಲ್ಲಿ ಜನಿಸಿರುವುದು ಹಿಂದಿನ ಜನ್ಮದ ಪುಣ್ಯದಿಂದ. ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಿ ಕೊಳ್ಳುವಂತೆ ಮುನಿಗಳು ಕರೆ ನೀಡಿದರು.
ಇಎಸ್ಐ ಚಿಕಿತ್ಸೆ ವಿಚಾರ ಸಂಕಿರಣ
ಹಾಸನ: ನಗರದ ಕೆಎಡಿಬಿ ಸಭಾಂಗಣದಲ್ಲಿ ಮೈಸೂರಿನ ಇ.ಎಸ್.ಡಿ. ನಿಗಮದ ಉಪ ಪ್ರಾದೇಶಿಕ ಕಾರ್ಯಾಲಯ ವತಿಯಿಂದ ಇ.ಎಸ್.ಐ. ಯೋಜನೆಯ ಬಗ್ಗೆ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ನಿಗಮದ 62ನೇ ಸ್ಥಾಪನಾ ದಿನದ ಅಂಗವಾಗಿ ಆಚರಿಸಲ್ಪಡುತ್ತಿರುವ ವಿಶೇಷ ಸೇವಾ ಪಾಕ್ಷಿಕದ ಅಂಗವಾಗಿ ಏರ್ಪಡಿಸಲಾಗಿತ್ತು.
ನ್ಯೂ ಮಿನರ್ವ ಮಿಲ್ನ ಜನರಲ್ ಮ್ಯಾನೇಜರ್ ಎ.ಬಿ. ರಮೇಶ್ ಉದ್ಘಾಟಿಸಿದರು. ಲೋಕಲ್ ಕಮಿಟಿ ಸದಸ್ಯ ಜಿ.ಎಲ್. ಮುದ್ದೇಗೌಡ, ಉಪ ಅಭಿವೃದ್ಧಿ ಅಧಿಕಾರಿ ಎ.ಎಂ. ಕುಮಾರ ಸ್ವಾಮಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೈಸೂರು ಇ.ಎಸ್.ಐ.ಪಿ., ಉಪ ಪ್ರಾದೇಶಿಕ ಕಾರ್ಯಾಲಯದ ಜಂಟಿ ನಿರ್ದೇಶಕ ಸಿ.ಎನ್. ರವೀಂದ್ರನಾಥ್ ಇ.ಎಸ್.ಐ. ಸೌಲಭ್ಯಗಳ ಬಗ್ಗೆ ಸ್ವವಿವರವಾಗಿ ತಿಳಿಸಿಕೊಟ್ಟರು.
ಚಿಕಿತ್ಸಾಲಕ್ಕೆ ಮನವಿ: ಮಧ್ಯಾಹ್ನದ ಕಾರ್ಯಾಗಾರದಲ್ಲಿ ನ್ಯೂ ಮಿನರ್ವ ಮಿಲ್ನ ಉಪ ವ್ಯವಸ್ಥಾಪಕ ಎನ್.ಕೆ. ಶ್ರೀವಾಸ್ತವ ಮಾತನಾಡಿ, ಆ್ಯಂಬುಲೆನ್ಸ್ ಸೇವೆ ಹಾಗೂ ಎಸ್.ಜಿ.ಜಡ್. ಪ್ರದೇಶದಲ್ಲಿ ಇ.ಎಸ್.ಐ. ಚಿಕಿತ್ಸಾಲಯ ತೆರೆಯುವಂತೆ ಕೋರಿಕೊಂಡರು.
ಒತ್ತಾಯ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಲೀಕರು ಹಾಗೂ ಉದ್ಯೋಗಿಗಳು ಈಗ ಸದ್ಯಕ್ಕೆ ನಗರದಲ್ಲಿ ಒಂದೇ ಆಸ್ಪತ್ರೆ ಇ.ಎಸ್.ಐ. ಯೋಜನೆಯಡಿ ಹೊಂದಾಣಿಕೆ ಮಾಡಿಕೊಂಡಿದೆ. ನಗರದ ಬೇರೆ ಬೇರೆ ಖಾಸಗಿ ಆಸ್ಪತ್ರೆಗಳನ್ನೂ ಸಹ ಇ.ಎಸ್.ಐ. ಯೋಜನೆಯಡಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶಾಖಾ ಕಚೇರಿ ವ್ಯವಸ್ಥಾಪಕ ಹೆಚ್.ಎಂ. ಜಯಂತಿ, ಮೈಸೂರು ಇ.ಎಸ್.ಐ.ಸಿ. ಉಪ ಪ್ರಾದೇಶಿಕ ಕಾರ್ಯಾಲಯದ ಅಧೀಕ್ಷಕ ರವೀಂದ್ರ, ಅಧೀಕ್ಷಕಿ ಲಲಿತಾ ಭಾಗವಹಿಸಿದ್ದರು.
'ಕಷ್ಟಪಟ್ಟರೆ ಯಶಸ್ಸು'
ಹಾಸನ: ವಿದ್ಯಾರ್ಥಿಗಳು ಯಾವಾ ಗಲೂ ಕಷ್ಟಪಡಲು ಸಿದ್ಧರಿದ್ದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪರಮೇಶ್ ಹೇಳಿದರು. ಅವರು ನಗರದ ಶ್ರೀ ಯತೀಂದ್ರ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ತಪ್ಪು ಮಾಡಿದರೆ ರೋಗಿ ಸಾವನ್ನಪ್ಪುತ್ತಾನೆ. ಆದ್ದರಿಂದ, ವೈದ್ಯರು ಮತ್ತು ಸಹಾಯಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು. ಡಾ. ಚಂದ್ರಶೇಖರ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ಪದ್ಮನಾರಾಯಣ ಉಪಸ್ಥಿತರಿದ್ದರು. ಮಂಜೇಗೌಡ ಸ್ವಾಗತಿಸಿದರು. ಮನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಹಕಾರ ಸಂಘಕ್ಕೆ ಆಯ್ಕೆ
ಹಾಸನ: ನಗರದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಅಕ್ಷಯ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಗೋಪಾಲ್ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ. ನಿಂಗೇಗೌಡ ಆಯ್ಕೆಯಾಗಿದ್ದಾರೆ. ಡಾ. ದಿನೇಶ್ ಬಿ., ಹೆಚ್.ಆರ್. ಮಂಜಪ್ಪಗೌಡ, ಬಿ.ಎನ್. ಪ್ರಮೋದ್, ಡಾ. ದಿನೇಶ್ ಎಸ್.ಆರ್., ಆರ್.ಪಿ. ವೆಂಕಟೇಶ ಮೂರ್ತಿ, ಪುಟ್ಟರಾಜೇಗೌಡ, ನಾಗೇಂದ್ರ ಕುಮಾರ್, ಮಮತಾಶಿವು, ಬಿ. ಶ್ರೀಪಾಲ್ ಕೊಥಾರಿ, ವೆಂಕಟೇಶ್ ಹಾಗೂ ವೇದಾವತಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನೂತನ ಸಂಘದ ಸರ್ವ ಸದಸ್ಯರ ಸಭೆ ಹಾಗೂ ಉದ್ಘಾಟನಾ ಸಮಾರಂಭ ಮಾ. 7ರಂದು ಬೆಳಿಗ್ಗೆ 9:30ಕ್ಕೆ ಆರ್.ಸಿ. ರಸ್ತೆಯಲ್ಲಿ ಕೆ.ಎಸ್.ಎಸ್.ಸಿ. ಕಚೇರಿ ಬಳಿ ಇರುವ ಸಂಘದ ಕಚೇರಿಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಡಾ. ಗುರುರಾಜ ಹೆಬ್ಬಾರ್ ಉದ್ಘಾಟಿಸುವರು. ಜಿ.ಎಲ್. ಮುದ್ದೇಗೌಡ ಹಾಗೂ ಡಾ. ಎಂ.ಪಿ. ಅಶೋಕಗೌಡ ಅವರು ಮುಖ್ಯ ಅತಿಥಿಗಳಾಗಿರುವರು. ಗೋಪಾಲ್ ಅಧ್ಯಕ್ಷತೆ ವಹಿಸುವರು.
ಸುಶೀಲೇಗೌಡರ ನಿಧನಕ್ಕೆ ಸಂತಾಪ
ಹಾಸನ: ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಕೆ.ಆರ್. ಸುಶೀಲೇಗೌಡರ ನಿಧನಕ್ಕೆ ರಾಜೀವ್ ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ನಿರ್ದೇಶಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹೆಚ್.ಎಸ್. ನಿಂಗಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಶೀಲೇಗೌಡರು ನನ್ನ ಆತ್ಮೀಯರಾಗಿದ್ದರು. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಶಿಸ್ತನ್ನು ರೂಢಿಸಿ ಕೊಂಡಿದ್ದರು. ಪ್ರಾಂಶುಪಾಲರಾಗಿದ್ದ ಅವಧಿಯಲ್ಲಂತೂ ವಿದ್ಯಾರ್ಥಿಗಳು ಮೆಚ್ಚುವ ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಅಕ್ರಮ ಮದ್ಯ: ವ್ಯಕ್ತಿಯ ಬಂಧನ
ಸಕಲೇಶಪುರ: ದಿನಸಿ ಅಂಗಡಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯ ವಶಪಡಿಸಿಕೊಂಡ ಆರೋಪಿಯನ್ನು ಬಂಧಿಸಿರುವ ಘಟನೆ ಹೆತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಯಸಳೂರು ಪೊಲೀಸ್ ಠಾಣೆ ಪಿಎಸ್ಐ ಸಿದ್ದೇಶ್ ನೇತೃತ್ವದ ತಂಡ ಗ್ರಾಮದ ಹಿರಣಯ್ಯ ಎಂಬುವವರ ದಿನಸಿ ಅಂಗಡಿಯನ್ನು ತಪಾಸಣೆ ನಡೆಸಿದ ವೇಳೆ ನಾನಾ ಮಾದರಿಯ ಸುಮಾರು ರು. 1200 ಮುಖ ಬೆಲೆಯ ಮದ್ಯ ಪತ್ತೆಯಾಗಿದೆ. ಆರೋಪಿ ಹಿರಣ್ಣಯ್ಯ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂದುಕಣ್ಣಿನ ಉಚಿತ ತಪಾಸಣೆ
ಹಾಸನ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ವಾಸನ್ಕ್ಣ್ಣಿನ ಆಸ್ಪತ್ರೆ ವತಿಯಿಂದ ಮಾ. 8ರಂದು ಉಚಿತ ಕಣ್ಣಿನ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ. ತಪಾಸಣೆಯ ಸಮಯದಲ್ಲಿ ಈಗಾಗಲೇ ಕನ್ನಡಕ ಬಳಸುತ್ತಿರುವವರು ಕನ್ನಡಕ ಜತೆ ಬಂದು ತಪಾಸಣೆ ಮಾಡಿಸಿಕೊಳ್ಳುವುದು. ಶೇ. 10ರಷ್ಟು ಕನ್ನಡಕಗಳಿಗೆ, ಶೇ. 10ರಷ್ಟು ಲ್ಯಾಸಿಕ್ ಸರ್ಜರಿಗೆ ಮತ್ತು ಇತರೆ ಸರ್ಜರಿಗಳಿಗೆ ಶೇ. 5ರಷ್ಟು ರಿಯಾಯ್ತಿ ಇದೆ. ಎಲ್ಲಾ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.