ಅನ್ಯಾಯ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಬಲೀಕರಣ
ಸಕಲೇಶಪುರ: ಅನ್ಯಾಯ ಪ್ರಶ್ನಿಸುವ ಮನೋಭಾವ ಬೆಳಸಿಕೊಂಡಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಸಮಾಜ ಸೇವಕಿ ಕೆ.ಟಿ. ಜಯಶ್ರೀ ಹೇಳಿದ್ದಾರೆ.
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರಗಳು ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ಮಹಿಳೆಯರನ್ನು ಕಡೆಗಣಿಸುತ್ತಿರುವುದು ನಗ್ನಸತ್ಯವಾಗಿದೆ. ಆದ್ದರಿಂದ ಯಾವುದೇ ಸರಕಾರಗಳಿಂದ,ಸಂಘ ಸಂಸ್ಥೆಗಳಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ ಎಂಬುದು ಇತಿಹಾಸದಿಂದ ತಿಳಿದುಬರುತ್ತಿದೆ ಎಂದರು.
ಹೋರಾಡುವ ಗುಣ ಬೇಕು: ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಅಧಿಪತ್ಯ ಮರೆದಿದ್ದು ನಮಗೆ ಸಮಾನತೆ ಕೊಡಿ ಎಂದು ಕೇಳದೇ ಆತ್ಮವಿಶ್ವಾಸದ ಮೂಲಕ ಕೆಲಸಮಾಡಿದರೆ ಅವಕಾಶಗಳು ನಮ್ಮನ್ನು ಅರಸಿಬರುವುದು ನಿಶ್ಚಿತ. ಅನ್ಯಾಯದ ವಿರುದ್ಧ ಹೋರಾಡುವ ಗುಣ ಮಹಿಳೆಯರು ಕರಗತಮಾಡಿಕೊಂಡಾಗ ಹಾಗೂ ವಿದ್ಯಾವಂತ ಮಹಿಳೆಯರು ತಮ್ಮ ಸುತ್ತಲಿನ ಮಹಿಳೆಯರ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸಿದರೆ ಮಹಿಳಾ ದಿನಾಚರಣೆಗೆ ಅರ್ಥ ಬರಲಿದೆ ಎಂದರು.
ಕಾಲೇಜು ಪ್ರಾಶುಂಪಾಲ ಕುಮಾರ್ ಮಾತನಾಡಿ, ವಿದ್ಯಾವಂತ ಮಹಿಳೆಯರು ತಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಹೋರಾಟ ನೆಡಸ ಬೇಕು. ಇಂದು ಎಲ್ಲಾ ರಂಗದಲ್ಲೂ ಮಹಿಳೆಯರಿದ್ದು ಪುರುಷ ಹಾಗೂ ಮಹಿಳೆ ಒಟ್ಟಾಗಿ ಕೆಲಸ ಮಾಡಿದರೆ ಪ್ರಗತಿ ಸಾಧ್ಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕುಡುಗರಹಳ್ಳಿ ಬಡಾವಣೆಯಲ್ಲಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಜವರಾಜಾಚಾರಿ,ಅಶೋಕ್, ಅನುರಾಧ, ಹರ್ಷಿತ, ಜ್ಯೋತಿ, ಅಶ್ವಿನಿ ಹಾಗೂ ಶೃತಿ ಇದ್ದರು.
'ಹೆಣ್ಣೆಂಬ ಕೀಳು ಭಾವನೆ ಬೇಡ'
ಹಾಸನ: ಸಮಾಜದೊಳಗೆ ನಮ್ಮನ್ನು ನಾವು ಹೆಣ್ಣು ಎಂಬ ಕೀಳು ಭಾವನೆ ಬೇಡ ಎಂದು ಮಲ್ನಾಡ್ ನರ್ಸಿಂಗ್ ಹೋಂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಡಾ. ಎ. ಸಾವಿತ್ರಿ ಕರೆ ನೀಡಿದ್ದಾರೆ.
ನಗರದ ಹೇಮಾವತಿ ನಗರ, ಎಲೈಟ್ ಸ್ಕೂಲ್ ಸಭಾಂಗಣದಲ್ಲಿ ಹೇಮಾವತಿ ಮಹಿಳಾ ಸಂಘ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಹಾಗೂ ಕೆ.ಸಿ.ಪಿ. ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೈ.ಎಸ್. ವೀರಭದ್ರಪ್ಪ, ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಹೇಮಾವತಿ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ವಿನಯರಘು, ಹಾಸನಾಂಬ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವಿನಾಕಲಗೂಡು, ಪ್ರಕಾಶಕರು ಎಂ. ಸದಾಶಿವ, ಕೃಪಾ ಪ್ರಭಾಕರ್, ವಿದುಷಿ ಸುಧಾ ನಟರಾಜ್, ಗಣೇಶ್ ಶರ್ಮ ಇದ್ದರು.